ಜಿಲ್ಲೆ

ಮಳೆ ಹಾನಿ ಪರಿಹಾರಕ್ಕೆ ಕ್ರಮ

ತುಮಕೂರು ಡೆಸ್ಕ್

ಸಚಿವ ಪರಮೇಶ್ವರ ಮಾಹಿತಿ | ಬಾಧಿತ ಪ್ರದೇಶಗಳಿಗೆ ಭೇಟಿ, ಪರಿಶೀಲನೆ

ಕೊರಟಗೆರೆ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜೀವ ಹಾನಿ, ಮನೆ ಹಾನಿ ಹಾಗೂ ಬೆಳೆ ಹಾನಿಗೊಳಗಾದವರು ಹಾಗೂ ಜಾನುವಾರು ಕಳೆದುಕೊಂಡವರಿಗೆ ತಕ್ಷಣವೇ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.


ಮಳೆಯಿಂದ ಹಾನಿಗೀಡಾದ ಕೊರಟಗೆರೆ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತೀವೃಷ್ಟಿ, ಅನಾವೃಷ್ಟಿ ಸೇರಿ ನೈಸರ್ಗಿಕ ವಿಕೋಪಗಳನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದರು. ಪ್ರಕೃತಿ ವಿಕೋಪಗಳಿಂದಾಗುವ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು 21.92 ಕೋಟಿ ರೂ. ಹಣ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಲಭ್ಯವಿದ್ದು, ತುರ್ತು ಪರಿಸ್ಥಿತಿಯಲ್ಲಿ ಖರ್ಚು ಮಾಡಲು ಜಿಲ್ಲಾಧಿಕಾರಿಗೆ ಅವಕಾಶವಿದೆ ಎಂದರು. ಮಳೆ ನೀರು ಹೆಚ್ಚಾದಾಗ ಜಯಮಂಗಲಿ ನದಿ ನೀರಿನ ಬ್ಯಾರೇಜ್​ ತುಂಬಿ ಚೆನ್ನಸಾಗರ ಗ್ರಾಮಕ್ಕೆ ಹೆಚ್ಚುವರಿ ನೀರು ನುಗ್ಗುವುದರಿಂದ ಗ್ರಾಮಸ್ಥರ ಜನ-ಜೀವನ ಅಸ್ತವ್ಯಸ್ತವಾಗುತ್ತದೆ. ಮುಂದಿನ ಬೇಸಿಗೆಯಲ್ಲಿ ವೈಜ್ಞಾನಿಕವಾಗಿ ಬ್ಯಾರೇಜ್​ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.


ಕೊರಟಗೆರೆ ಪಟ್ಟಣದ ಹೊಸ ಬಡಾವಣೆ ಪ್ರದೇಶ, ಮಳೆ ನೀರಿನಿಂದ ಹಾನಿಗೊಳಗಾದ ಪೈಪ್​ಲೈನ್​ ಕಾಮಗಾರಿ ವೀಕ್ಷಿಸಲು ಊರ್ಡಿಗೆರೆ ಕ್ರಾಸ್​ಗೆ ಪರಮೇಶ್ವರ ಭೇಟಿ ನೀಡಿದರು. ಚನ್ನಸಾಗರ ಗ್ರಾಮಕ್ಕೆ ಭೇಟಿ ನೀಡಿ ಜಯಮಂಗಲಿ ನದಿ ನೀರಿನ ಹರಿವನ್ನು ಪರಿಶೀಲಿಸಿದ ನಂತರ ತೂಬುಗಳಲ್ಲಿ ಕಟ್ಟಿಕೊಂಡಿರುವ ಕಸ-ಕಡ್ಡಿಗಳನ್ನು ಕೂಡಲೇ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ದಾರಿ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಯಿಂದ ಮನೆ ಹಾನಿಗೊಳಗಾದ ಸಂತ್ರಸ್ತರಾದ ಕೊರಟಗೆರೆ ತಾಲೂಕು ಸಿ.ಎನ್​.ದುರ್ಗ ಹೋಬಳಿ ಅಜ್ಜೀಹಳ್ಳಿಯ ಶಂಕ್ರಮ್ಮ ಹಾಗೂ ಕಸಬಾ ಹೋಬಳಿ ಹಂಚಿಹಳ್ಳಿಯ ಕೆಂಪಯ್ಯ ಅವರಿಗೆ ತಲಾ 50 ಸಾವಿರ ರೂ.ಪರಿಹಾರದ ಚೆಕ್​ ನೀಡಲಾಯಿತು. ಜಿಲ್ಲಾಧಿಕಾರಿ ಶುಭಕಲ್ಯಾಣ್​, ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ತಹಸೀಲ್ದಾರ್​ ಮಂಜುನಾಥ್​ ಇದ್ದರು.

ಈವರೆಗೆ 592 ಮಿಮೀ ವರ್ಷಧಾರೆ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಈವರೆಗೆ 592 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.94 ಅಧಿಕ ಮಳೆಯಾಗಿದೆ. ಅಧಿಕ ಮಳೆಯಿಂದ ಹೆಚ್ಚಿನ ನಷ್ಟ ಉಂಟಾಗಿಲ್ಲ. ಮಳೆ ನೀರಿನಿಂದ ಜಿಲ್ಲೆಯಲ್ಲಿ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿರುವ 371 ಕೆರೆಗಳ ಪೈಕಿ 18 ಕೆರೆಗಳು ಶೇ.51 ರಿಂದ 99ರಷ್ಟು ಹಾಗೂ 10 ಕೆರೆಗಳು ಪೂರ್ಣ ತುಂಬಿವೆ. ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ವ್ಯಾಪ್ತಿಯೊಳಗೆ ಪೂರ್ಣ ತುಂಬಿರುವ ಯಾವುದೇ ಕೆರೆಗಳ ಕೋಡಿ ಒಡೆದಿಲ್ಲ. ಬಹುತೇಕ ಕೆರೆ ಕೋಡಿಗಳು ಸುರಕ್ಷಿತವಾಗಿವೆ. ಮಳೆಯಿಂದ 135 ಬಹುತೇಕ ಹಾನಿಗೊಳಗಾದ ಹಾಗೂ ಸಂಪೂರ್ಣ ಹಾನಿಗೊಳಗಾದ 5 ಮನೆಗಳ ಸಂತ್ರಸ್ತರಿಗೆ 11.29 ಲಕ್ಷ ರೂ. ಪರಿಹಾರ ನೀಡಲಾಗಿದೆ. 43 ಹೆಕ್ಟೇರ್​ ಬೆಳೆ ಹಾನಿಗೊಳಗಾಗಿದ್ದು, ಹಾನಿಗೊಳಗಾದ ಬೆಳೆಯನ್ನು ಸರ್ವೇ ಮಾಡಿ ಉಂಟಾದ ನಷ್ಟವನ್ನು ಅಂದಾಜಿಸಿ ರೈತರಿಗೆ ಪರಿಹಾರ ಒದಗಿಸುವ ಭರವಸೆ ನೀಡಲಾಗಿದೆ. ಎಲ್ಲ ತಾಲೂಕು ತಹಸೀಲ್ದಾರರ ಪರಿಹಾರ ನಿಧಿಯಲ್ಲಿ 3.47 ಕೋಟಿ ರೂ. ಹಣ ಲಭ್ಯವಿದ್ದು, ವಿಪತ್ತು ನಿರ್ವಹಣಾ ನಿಯಮಗಳನ್ವಯ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಚನ್ನಸಾಗರ ಸ್ಥಳಾಂತರಕ್ಕೆ ಚಿಂತನೆ: ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗ ಚನ್ನಸಾಗರ ಗ್ರಾಮಕ್ಕೆ ನೀರು ನುಗ್ಗುವುದರಿಂದ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಡಾ.ಜಿ.ಪರಮೇಶ್ವರ ಅವರಲ್ಲಿ ಮನವಿ ಮಾಡಿದಾಗ ಸ್ಪಂದಿಸಿದ ಸಚಿವರು, ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರಿ ಜಮೀನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಸೂಚಿಸಿದರು.