ತಿಪಟೂರು: ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ಅಸಮಾನತೆ ತಾಂಡವವಾಡುತ್ತಿದೆ. ಸಮಾನತೆ ಪ್ರತಿಬಿಂಬವಾದ ಪ್ರಜಾಪ್ರಭುತ್ವ ಅರ್ಥ ಕಳೆದುಕೊಂಡಿದೆ. ಸಾಹಿತ್ಯದ ಆಶಯ ಈಡೇರಬೇಕಿದ್ದರೆ, ಸಮಾಜದ ಅನ್ನ ತಿಂದು ಬೆಳೆದವರು ಮತ್ತೆ ಇದರತ್ತ ಹೆಜ್ಜೆ ಹಾಕಬೇಕಿದೆ ಎಂದು ಸಮ್ಮೇಳನ ಅಧ್ಯಕ್ಷ ಬಿಳಿಗೆರೆ ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ಕೆ.ಬಿ. ಕ್ರಾಸ್ನಲ್ಲಿ ಶನಿವಾರ ತಾಲೂಕು ಹಾಗೂ ಕಿಬ್ಬನಹಳ್ಳಿ ಹೋಬಳಿ ಕಸಾಪ ವತಿಯಿಂದ ಆಯೋಜಿಸಿದ್ದ ತಿಪಟೂರು ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ನದ ಕಾಲ ಹೋಗಿ, ಚಿನ್ನದ ಕಾಲ ಬಂದಿದೆ. ಸಾಂಸತಿಕ ಕ್ಷೇತ್ರದಲ್ಲೂ ರಾಜಕಾರಣ ನಡೆದಿರುವುದು ವಿಪರ್ಯಾಸ. ಸಾಹಿತ್ಯದ ಸ್ವರೂಪ ಬದಲಾಗಬೇಕಿದೆ. ಎಲ್ಲರ ಮನಗಳಲ್ಲಿ ಮನೆ ಮಾಡುವ ರೀತಿಯಲ್ಲಿ ಸಮ್ಮೇಳನ, ಸಮಾರಂಭ ಆಯೋಜಿಸಬೇಕಿದೆ ಎಂದರು.
ಕೃಷಿಗೆ ತಂತ್ರಜ್ಞಾನವಿಲ್ಲದ ಕಾರಣ 15 ವರ್ಷಗಳಲ್ಲಿ 2.85 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತಗೀತೆ ಹಾಡಿಗೆ ಸೀಮಿತವಾಗಿದೆ. ಕೃಷಿಗೆ ಚಿಂತನೆ ಮತ್ತು ತಂತ್ರಜ್ಞಾನ ಒದಗಿಸಿದಾಗ ಮಾತ್ರ ರೈತರು ಮತ್ತು ಕೃಷಿ ಉಳಿವು ಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಕೃಷಿ ಕ್ಷೇತ್ರಕ್ಕೆ ಘನತೆ ತರುವ ಕೆಲಸವಾಬೇಕಿದೆ. ಇನ್ನು ಒಂದು ವರ್ಷ ತಾಲೂಕಿನಲ್ಲಿ ನೀರಿಲ್ಲದಿದ್ದರೆ. ಕಲ್ಪತರು ನಾಡು ಬರಡು ಭೂಮಿಯಾಗಲಿದೆ. ಇನ್ನಾದರೂ ಬೆಳೆ ಪದ್ಧತಿಗೆ ಮಾರು ಹೋಗದೆ, ಬಹು ಬೆಳೆ ಕೃಷಿಯತ್ತ ಚಿಂತಿಸಬೇಕಿದೆ ಎಂದರು.
ಶಾಸಕ ಷಡಕ್ಷರಿ ಮಾತನಾಡಿ, ನೀರಿನ ಹಂಚಿಕೆಯಲ್ಲಿನ ತಾರತಮ್ಯದಿಂದ ಒಣಗುತ್ತಿರುವ ಕಲ್ಪತರು ನಾಡನ್ನು ಹಚ್ಚ ಹಸಿರಾಗಿಸುವ ಸಂಕಲ್ಪ ಹೊಂದಿದ್ದೇನೆ. ಸಮ್ಮೇಳನಾಧ್ಯಕ್ಷರಾದ ಬಿಳಿಗೆರೆ ಕೃಷ್ಣಮೂರ್ತಿ ಅವರು ಆತಂಕ ಪಟ್ಟಿರುವಂತೆ ಕಲ್ಪತರು ನಾಡನ್ನು ಬರದ ನಾಡಾಗಲು ಬಿಡುವುದಿಲ್ಲ. ಈ ನಾಡು ಕಲೆ, ಸಂಸತಿ, ಸಾಹಿತ್ಯ, ಸಜ್ಜನಿಕೆ ಹೊಂದುವ ಮೂಲಕ ತನ್ನದೇ ಆದ ಇತಿಹಾಸ ಸೃಷ್ಟಿಸಿದೆ ಎಂದರು.
ತಾಲೂಕಿನ ಜನತೆಗೆ, ಮತ್ತು ರೈತರಿಗೆ ನೀರನ್ನು ಪೂರೈಸದ ಮೇಲೆ ಶಾಸಕನಾಗಿದ್ದೂ ಪ್ರಯೋಜನವಿಲ್ಲ. ನೀರು ಯಾರೋಬ್ಬರ ಸ್ವತ್ತಲ್ಲ. ಎತ್ತಿನಹೊಳೆ ಯೋಜನೆಯಲ್ಲಿ ಕೈಬಿಡಲಾಗಿದ್ದ ತಿಪಟೂರು, ಚಿಕ್ಕನಾಯಕನಹಳ್ಳಿ, ಮತ್ತು ಗುಬ್ಬಿ ತಾಲೂಕುಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದರಿಂದ ಈ ಬಾಗಕ್ಕೆ 0.5 ಟಿಎಂಸಿ. ನೀರು ಲಭ್ಯವಾಗಿದೆ. ಟಿ.ಬಿ. ಜಯಚಂದ್ರ ನೀರಿನ ವಿಷಯದಲ್ಲಿ ಸ್ವಾರ್ಥಿಯಾದರೂ, ಭದ್ರಾ ಮೇಲ್ದಂಡೆ ಯೊಜನೆ ಮೂಲಕ ಹೊನ್ನವಳ್ಳಿ ಭಾಗಕ್ಕೆ ಏತ ನೀರಾವರಿ ಮೂಲಕ ನೀರು ತರುವ ಯೋಜನೆ ಹಾಕಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ತಾಲೂಕನ್ನು ಬರಡು ಭೂಮಿಯಾಗಲು ಬಿಡಲ್ಲ. ಇದನ್ನು ನಿವಾರಿಸುವ ಶಕ್ತಿ ನನಗಿದೆ ಎಂದರು. ಸಮಾರಂಭ ಉದ್ಘಾಟಿಸಿದ ಸಾಹಿತಿ ಪ್ರೊ. ನಟರಾಜ್ ಬೂದಾಳ್ ಮಾತನಾಡಿ, ಮೂಡಲಪಾಯ ಯಕ್ಷಗಾನ ಮತ್ತು ಅರೆವಾದ್ಯ ಜನ್ಮ ತಾಳಿದ್ದೇ ಕಲ್ಪತರು ನಾಡಿನಲ್ಲಿ. ಈ ಹಿಂದಿನ ವಿದ್ಯೆಗಳನ್ನು ಜತನದಿಂದ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಸಾಗಿಸುವ ಕೆಲಸವಾಗಬೇಕಿದೆ. ಊರ ಮುಂದಿನ ಗುಡಿ, ಗೋಪುರಗಳನ್ನು ನವೀಕರಿಸುವುದಕ್ಕೆ ನೀಡುವ ಆದ್ಯತೆಯನ್ನು ಸರ್ಕಾರಿ ಶಾಲೆಗಳ ನವೀಕರಣಕ್ಕೂ ನೀಡಬೇಕಿದೆ ಎಂದರು.
ಕೆ.ಬಿ. ಕ್ರಾಸಿನಿಂದ ಶ್ರೀಮದ್ ರಂಭಾಪುರಿ ಪ್ರೌಡಶಾಲಾ ಆವರಣದ ವೇದಿಕೆವರೆಗೂ ಗಣ್ಯರನ್ನು ಹಸಿರು ಸಸಿಗಳ ಮೆರವಣಿಗೆ ಮೂಲಕ ಕರೆತರಲಾಯಿತು. ಬಿಳಿಗೆರೆ ಗ್ರಾಪಂ ಅಧ್ಯಕ್ಷೆ ಜಿ.ಎಂ. ಕಲ್ಪನಾ. ಹಿಂಡಿಸ್ಕೆರೆ ಗ್ರಾಪಂ ಅಧ್ಯಕ್ಷೆ ವಿದ್ಯಾ ಮಲ್ಲೇಶ್. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ. ತಾಲೂಕು ಕಸಾಪ ಅಧ್ಯಕ್ಷ ಎಂ.ಬಸವರಾಜಪ್ಪ ಇತರರು ಇದ್ದರು. ರವೀಶ್ ಕೊಟ್ಟಿಗೇಹಳ್ಳಿ ಬರೆದ ಅಮೃತ ತರಂಗಿಣಿ, ಶ್ರೀಮತಿ ಸಿದ್ದಗಂಗಮ್ಮ ಬರೆದ ದೈತ್ರದ ಚಿಗುರು, ಡಾ.ಎಸ್.ಎಲ್ಲ ರಾಜಶೇಖರಯ್ಯ ಬರೆದ ನನ್ನ ವೃತ್ತಿ ಬದುಕಿನ ಸಿಹಿ,ಕಹಿ ಪ್ರಸಂಗಗಳು ಎಂಬ ಪುಸ್ತಕಗಳು ಬಿಡುಗಡೆ ಮಾಡಲಾಯಿತು.
ಮೂಗಿಗೆ ತುಪ್ಪ ಸವರುವ, ಮೆದುಳಿಗೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ನೀರಿನ ಹಂಚಿಕೆ, ಬಳಕೆ ಜತೆಗೆ ಶಿಕ್ಷಣ ವ್ಯವಸ್ಥೆ ಬದಲಾಗದಿದ್ದರೆ ರಾಜ್ಯ ಶೀಘ್ರದಲ್ಲಿ ಎರಡನೇ ಮರುಭೂಮಿಯಾಗಲಿದೆ. ಜನರ ತೆರಿಗೆ ದುಡ್ಡಿನಲ್ಲಿ ನಡೆಯುವ ಶಾಸನ ಸಭೆ ಮತ್ತು ಲೋಕಸಭೆಗಳಲ್ಲಿ ಶಾಸಕರು, ಸಂಸದರು ಜಗಳ ಆಡುವುದು ವಿಪರ್ಯಾಸ. - ಬಿಳಿಗೆರೆ ಕೃಷ್ಣಮೂರ್ತಿ ಸಮ್ಮೇಳನಾಧ್ಯಕ್ಷ