ಜಿಲ್ಲೆ

ಜೇಡ್ಲ ಗೋಶಾಲೆಯಲ್ಲಿ ಅರ್ಥಪೂರ್ಣ ಮಕರ ಸಂಕ್ರಾಂತಿ ಆಚರಣೆ

ಮಡಿಕೇರಿ: ಶ್ರೀ ರಾಮಚಂದ್ರಪುರ ಮಠದ ಅಧೀನದಲ್ಲಿರುವ ಸಂಪಾಜೆಯ ಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನಾ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳ ಆರೋಗ್ಯ ಸುಧಾರಣೆ ಹಾಗೂ ಗ್ರಾಮದ ಕ್ಷೇಮಾಭಿವೃದ್ಧಿಗೆ ಪ್ರಾರ್ಥಿಸಿ ಗೋಪೂಜೆ ಮತ್ತು ಗೋವುಗಳ ಕಿಚ್ಚು ಹಾಯಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಬಯಲುಸೀಮೆಯಲ್ಲಿ ಚಿರಪರಿಚಿತವಾಗಿದ್ದ ಸುಗ್ಗಿಹಬ್ಬದ ಈ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆಚರಿಸಲಾಯಿತು. ಸರಳವಾಗಿ ಅಲಂಕರಿಸಿದ್ದ ಗೋವುಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಯಿತು.


ಸುಳ್ಯದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿ, ಗೋವುಗಳನ್ನು ಕಿಚ್ಚು ಹಾಯಿಸುವುದರ ಪ್ರಾಮುಖ್ಯತೆ ಹಾಗೂ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣ ವಿವರಿಸಿದರು.


ಕಾರ್ಯಕ್ರಮದಲ್ಲಿ ಗೋಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ನಾಲ್ವರು ಗೋಪ್ರೇಮಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರ್ಯಕ್ರಮದ ಮುಖ್ಯ ಭಾಗವಾಗಿ ಗೋವುಗಳನ್ನು ಕಿಚ್ಚು ಹಾಯಿಸಿ ನಂತರ ಗೋಪೂಜೆ ನೆರವೇರಿಸಿ ಗೋವುಗಳಿಗೆ ಬೆಲ್ಲ ತಿನ್ನಿಸಲಾಯಿತು. ಕೊಡಗು, ಸುಳ್ಯ, ಗುತ್ತಿಗಾರು, ಈಶ್ವರಮಂಗಲ ಹವ್ಯಕ ವಲಯದ ಅಧ್ಯಕ್ಷರು, ಗುರಿಕ್ಕಾರರು, ಪದಾಧಿಕಾರಿಗಳು, ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಗೋಶಾಲೆಯ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ ಕಬ್ಬಿನಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲುಗುಂಡಿಯ ವೈದ್ಯ ಡಾ.ಜಯರಾಮ್ ಭಟ್ ಗೋಬಂಧು ಯೋಜನೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆಯ ಕಾರ್ಯಾಧ್ಯಕ್ಷ ಡಾ.ರಾಜಾರಾಮ್ ಅಖಿಲಾತಿ ವಹಿಸಿದ್ದರು. ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಭರತ್, ಗೋಶಾಲೆಯ ಕೋಶಾಧಿಕಾರಿ ಈಶ್ವರಕುಮಾರ ಉಬರಡ್ಕ ಪಾಲ್ಗೊಂಡಿದ್ದರು.