ಜಿಲ್ಲೆ

ಸಕಾಲದಲ್ಲಿ ಪಡಿತರ ಧಾನ್ಯ ಪೂರೈಕೆ ಮಾಡಲು ಕ್ರಮ ವಹಿಸಿ

ಎ. ಆರ್. ರಘುರಾಮ

ಮದ್ದೂರು : ನ್ಯಾಯಬೆಲೆ ಅಂಗಡಿ ಮಾಲೀಕರು ಆಹಾರ ಪಡಿತರ ಚೀಟಿದಾರರಿಗೆ ಸಕಾಲದಲ್ಲಿ ಪಡಿತರವನ್ನು ಪೂರೈಕೆ ಮಾಡುವುದರ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಿ.ಬಸವರಾಜು ತಿಳಿಸಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಮಗಳಲ್ಲಿ ಕೇವಲ ಎರಡು ಮೂರು ದಿನಗಳನ್ನು ತೆರೆದು ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು ಬಳಿಕ ದಿನನಿತ್ಯ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿರುವುದಾಗಿ ಹೇಳಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಕುಟುಂಬಗಳಿಗೂ ತಲುಪಲು ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಮತ್ತು ಯಾವುದೇ ಲೋಪದೋಷಗಳು ಕಂಡು ಬರದಂತೆ ಹೆಚ್ಚಿನ ಒತ್ತು ನೀಡಬೇಕು. ಜತೆಗೆ ಯೋಜನೆಗಳು ತಲುಪದಿರುವ ಕುಟುಂಬಗಳಿಗೆ ಸರಕಾರದ ಯೋಜನೆ ತಲುಪಲು ಕ್ರಮ ವಹಿಸಬೇಕೆಂದರು. ತಾ.ಪಂ. ಯೋಜನಾಧಿಕಾರಿ ಆರ್.ಸುರೇಶ್, ಅನುಷ್ಠಾನ ಸಮಿತಿ ಸದಸ್ಯರಾದ ಭಾನುಪ್ರಕಾಶ್, ರಾಜೇಂದ್ರ, ರಾಜಣ್ಣ, ಗೀತ, ನಾಗಮ್ಮ, ವೆಂಕಟೇಶ್, ಕಿರಣ್, ಬೋರೇಗೌಡ, ರಾಜು, ಸಿದ್ದಲಿಂಗ ಪ್ರಸಾದ್ ಹಾಗೂ ಅಧಿಕಾರಿಗಳು ಹಾಜರಿದ್ದರು.