ಮದ್ದೂರು: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಫಲವಾಗಿ ಬೆಂಗಳೂರು ಬೃಹದಾಕಾರವಾಗಿ ಬೆಳೆದಿದ್ದು, ಕೋಟ್ಯಂತರ ಜನರಿಗೆ ಉದ್ಯೋಗ, ಸೂರು ಕಲ್ಪಿಸಿಕೊಟ್ಟಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್ ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ತಾಲೂಕು ಸಂಘಟನೆ ವತಿಯಿಂದ ಸೋಮವಾರ ಪಟ್ಟಣದ ಸಂಜಯ ವೃತ್ತದಲ್ಲಿ ಆಯೋಜಿಸಿದ್ದ 516ನೇ ಕೆಂಪೇಗೌಡ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನೂರಾರು ಕೆರೆ-ಕಟ್ಟೆ ಮತ್ತು ಪ್ರತ್ಯೇಕವಾಗಿ ಹಲವು ಪೇಟೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಎಲ್ಲರೂ ಬದುಕು ಕಟ್ಟಿಕೊಳ್ಳಲು ನಿರಂತರವಾಗಿ ಶ್ರಮಿಸಿದ ಮೇರು ವ್ಯಕ್ತಿ ಎಂದು ಬಣ್ಣಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅವರನ್ನು ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ ಗೌರವಿಸಲಾಯಿತು. ಒಕ್ಕಲಿಗರ ಸಂಘದ ನಿರ್ದೇಶಕರಾದ ಅಶೋಕ್‌ಜಯರಾಮು, ಮಂಡ್ಯ ಚಂದ್ರು, ಚುಂಚುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಡಿ.ಪಿ.ಶಿವಪ್ಪ, ಉಪಾಧ್ಯಕ್ಷ ಶಂಕರಯ್ಯ, ಪದಾಧಿಕಾರಿಗಳಾದ ವಿ.ಟಿ.ರವಿಕುಮಾರ್, ಸುರೇಶ್, ಮಾರಸಿಂಗನಹಳ್ಳಿ ರಾಮಚಂದ್ರು, ಜಿ.ಸಿ.ಮಹೆಶ್, ದೊರೆಸ್ವಾಮಿ, ಶಿವಕುಮಾರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ಇದ್ದರು.