ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಸೂಚನೆ
ಮುಂಗಾರು ಹಂಗಾಮಿಗೆ ಸಿದ್ಧತೆ
ಮದ್ದೂರು : ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಯೂರಿಯಾ ರಸಗೊಬ್ಬರವನ್ನು ಭೂಮಿಗೆ ಸೇರಿಸಬಾರದು ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಹೇಳಿದರು.
2025ರ ಮುಂಗಾರು ಹಂಗಾಮ ಆರಂಭಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ರಸಗೊಬ್ಬರಗಳ ಸಮರ್ಪಕ ನಿರ್ವಹಣೆ ಮಾಡಬೇಕು. ಕೃಷಿಯೇತರ ಚಟುವಟಿಕೆಗಳಿಗೆ ರಸಗೊಬ್ಬರ ಬಳಕೆ ಮಾಡಬಾರದು ಎಂದರು. ಇಲಾಖೆಯಿಂದ ಶಿಫಾರಸು ಮಾಡಿದಂತೆಯೇ ಸಮತೋಲನ ರೀತಿಯಲ್ಲಿ ರಸಗೊಬ್ಬರ ಬಳಕೆ ಮಾಡಬೇಕು.
ಕಳೆ, ಕ್ರಿಮಿ ನಾಶಕಗಳ ಬಳಕೆ ಸಂದರ್ಭ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಂದ ಸೂಕ್ತ ಸಲಹೆ ಪಡೆಯಬೇಕು ಎಂದರು.
ಬೆಳೆಗಳಲ್ಲಿ ಕ್ರಿಮಿ ನಾಶಕಗಳ ಶೇಷಾಂಶ ತಗ್ಗಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಕೃಷಿ ಪರಿಕರ ಮಾರಾಟ ಗಾರರಿಗೆ ತಿಳಿಸಿದರು. ತಾಲೂಕಿನ ಮಣ್ಣಿನಲ್ಲಿ ಅಂದಾಜು ಶೇ. 30 ರಷ್ಟು ಜಿಂಕ್, ಶೇ. 70 ರಷ್ಟು ಬೊರಾನ್, ಲಘು ಪೋಷಕಾಂಶಗಳು ಕಡಿಮೆ ಇದೆ. ರೈತರು ಭತ್ತ, ರಾಗಿ, ಕಬ್ಬು ಬೆಳೆಗಳಲ್ಲಿ ಇಳುವರಿ ಹೆಚ್ಚಿಸಲು ಸಮಗ್ರ ಪೋಷಕಾಂಶ ಹಾಗೂ ಜೈವಿಕ ಗೊಬ್ಬರಗಳನ್ನು ತಪ್ಪದೇ ಬಳಕೆ ಮಾಡಬೇಕು. ಈ ಮೂಲಕ ಇಳುವರಿ ಹೆಚ್ಚಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದರು.
ಕೊರತೆ ಇಲ್ಲ: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ತಾಲೂಕಿನಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಸೇರಿದಂತೆ ಎಲ್ಲ ರೀತಿಯ ರಸಗೊಬ್ಬರಗಳು ಲಭ್ಯವಿದೆ. ಈಗಾಗಲೇ 2025ರ ಏಪ್ರಿಲ್ ಮಾಹೆಯಿಂದ ಈವರೆಗೆ 6,210 ಮೆ.ಟನ್ ರಸಗೊಬ್ಬರ ತಾಲೂಕಿಗೆ ಸರಬರಾಜಾಗಿದೆ. ಪ್ರಸ್ತುತ 3181 ಮೆ.ಟನ್ ದಾಸ್ತಾನು ಲಭ್ಯವಿದೆ.
ತಾಲೂಕಿನಲ್ಲಿ ಯಾವುದೇ ರಸಗೊಬ್ಬರಗಳಿಗೆ ಕೊರತೆ ಇಲ್ಲ ಎಂದರು. ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ನಿಯಂತ್ರಣ ಆದೇಶ 1985 ರಂತೆ ಮಳಿಗೆಯಲ್ಲಿರುವ ದಾಸ್ತಾನು ಪ್ರಮಾಣ ಹಾಗೂ ದರ ಪಟ್ಟಿಯನ್ನು ದೊಡ್ಡದಾಗಿ ಕಾಣುವಂತೆ ಪ್ರದರ್ಶನ ಮಾಡಬೇಕು. ಯೂರಿಯಾ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸಬಾರದು ಎಂದರು. ಪ್ರತಿ ದಿನ ಆರಂಭಿಕ ದಾಸ್ತಾನು, ಮಾರಾಟ, ಹಾಗೂ ಉಳಿಕೆ ದಾಸ್ತಾನು ಪ್ರಮಾಣವನ್ನು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲು ಅವರು ಸೂಚಿಸಿದರು. ತಪ್ಪಿದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
*
ತಾಳೆಯಾಗುವಂತೆ ಕ್ರಮ ವಹಿಸಿ:
ಉಪ ಕೃಷಿ ನಿರ್ದೇಶಕ ಆರ್.ಮುನೇಗೌಡ ಮಾತನಾಡಿ, ವಿವಿಧ ರಸಗೊಬ್ಬರಗಳಿಗೆ ಸಂಬಂಧಪಟ್ಟ ಸಂಸ್ಥೆಯಿಂದ ಒ ಫಾರಂ, ಪಡೆದು ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆದ ನಂತರವೇ ರೈತರಿಗೆ ಮಾರಾಟ ಮಾಡಬೇಕು. ರಸಗೊಬ್ಬರ ಮಾರಾಟ ಮಳಿಗೆಯಲ್ಲಿರುವ ಭೌತಿಕ ದಾಸ್ತಾನಿಗೂ ಪಿ.ಒ.ಎಸ್. ಸಾಧನದಲ್ಲಿರುವ ದಾಸ್ತಾನಿಗೂ ತಾಳೆಯಾಗುವಂತೆ ಕ್ರಮ ವಹಿಸಲು ಅವರು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ ಮಾತನಾಡಿ, ರಸಗೊಬ್ಬರ ನಿರ್ವಹಣೆ ಮಾಡುವಲ್ಲಿ ಯಾವುದೇ ಲೋಪದೋಷ ಕಂಡು ಬಂದರೂ ಸಂಬಂಧಪಟ್ಟ ಮಾರಾಟಗಾರರನ್ನೇ ನೇರ ಜವಾಬ್ದಾರರನ್ನಾಗಿಸಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಗುವುದೆಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ (ಜಾರಿ ದಳ) ಚನ್ನಕೇಶವ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಶ್ರೀಹರ್ಷ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿದೇಶಕಿ ಸೌಮ್ಯಶ್ರೀ, ಪೊಲೀಸ್ ವೃತ್ತ ನಿರೀಕ್ಷಕ ವೆಂಕಟೇಗೌಡ, ಉಪ ನಿರೀಕ್ಷಕ ಕೆ.ಮಂಜುನಾಥ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ, ರೇಷ್ಮೆ ಸಹಾಯಕ ನಿರ್ದೇಶಕ ಸುರೇಶ್, ಕೃಷಿ ತಾಂತ್ರಿಕ ಅಧಿಕಾರಿ ಎಸ್.ದಯಾನಂದ ಕುಮಾರ್, ಕೃಷಿ ಅಧಿಕಾರಿಗಳಾದ ಬಿ.ಭವಾನಿ, ಎನ್.ರೂಪಶ್ರೀ, ಕೆ.ಎನ್.ಕರುಣ, ಆತ್ಮ ಯೋಜನೆ ಸಿಬ್ಬಂದಿ ಎ.ಎಸ್.ಗವಾಸ್ಕರ್, ಕೆ.ಎಸ್.ವಿಜಯ ಕುಮಾರ್, ಕುಸುಮಾ, ಅಕ್ಷತಾ ಇತರರು ಇದ್ದರು.