* ಐವರಿಗೆ ತೀವ್ರ ಗಾಯ
ಮದ್ದೂರು : ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡ ಘಟನೆ ಅಗರಲಿಂಗನದೊಡ್ಡಿ ಗ್ರಾಮದ ಬಳಿ ಭಾನುವಾರ ರಾತ್ರಿ ಜರುಗಿದೆ.
ಕಾರಿನಲ್ಲಿದ್ದ ಬೆಂಗಳೂರು ಮೂಲದ ಮಕ್ಸೂದ್ (21), ಅಯಾನ್ (25) ಮೃತರು. ಮುಜಾಹಿದ್ ಪಾಷ, ಬಸವರಾಜು, ಪಾರ್ವತಿ, ನಾಗರತ್ನಾ ಹಾಗೂ ನಾಗರಾಜು ಎಂಬವರು ಗಾಯಗೊಂಡಿದ್ದಾರೆ. ಇವರಿಗೆ ಚನ್ನಪಟ್ಟಣದ ಚಾಮುಂಡೇಶ್ವರಿ ಆಸ್ಪತ್ರೆ ಮತ್ತು ಮದ್ದೂರಿನ ಕೆ.ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಮತ್ತು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸ್ಕೋಡಾ ಕಾರಿನಲ್ಲಿ ಮಕ್ಸೂದ್, ಅಯಾನ್ ಹಾಗೂ ಮುಜಾಯಿದ್ ಪಾಷ ಎಂಬವರು ತೆರಳುತ್ತಿದ್ದರು. ಈ ಕಾರು ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಮೂಲದ ಪಾರ್ವತಿ, ಬಸವರಾಜು, ನಾಗರತ್ನಾ ಹಾಗೂ ನಾಗರಾಜು ಎಂಬವರಿಗೂ ತೀವ್ರ ಗಾಯಗಳಾಗಿವೆ. ಪೊಲೀಸರು ವಾಹನಗಳನ್ನು ತೆರವು ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.