ಜಿಲ್ಲೆ

ಮೆಗ್ಗಾನ್‌ನಲ್ಲಿ ಸೂಕ್ತ ಆಕ್ಸಿಜನ್ ಸೌಲಭ್ಯ ಕಲ್ಪಿಸಿ: ಎಂ.ಶ್ರೀಕಾಂತ್

Shivamogga

ಶಿವಮೊಗ್ಗ: ಮೆಗ್ಗಾನ್ ಸಾವಿರ ಬೆಡ್‌ನ ಆಸ್ಪತ್ರೆಯಾಗಿದ್ದು, ದಿನದಿಂದ ಹೆಚ್ಚುತ್ತಿರುವ ಸೋಂಕಿತರಿಗೆ ಸೂಕ್ತ ಬೆಡ್ ಹಾಗೂ ಆಕ್ಸಿಜನ್ ಸೌಲಭ್ಯ ಮತ್ತು ವೆಂಟಿಲೇಟರ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಸಲಹೆ ನೀಡಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಬೋರ್ಡ್ ಹಾಕುವುದು ಸರಿಯಲ್ಲ. ಪ್ರತಿದಿನ ನೂರಾರು ಜನರು ಆಸ್ಪತ್ರೆ ಬಂದು ಬೆಡ್‌ಗಾಗಿ ಗೋಗೆರೆಯುವಂತಾಗಿದೆ. ವೈದ್ಯರನ್ನು ಕಾಡಿಬೇಡಿದರೂ ಬೆಡ್ ಸಿಗದ ವ್ಯವಸ್ಥೆ ನಿರ್ಮಾಣವಾಗಿದ್ದು, ಮಧ್ಯಮವರ್ಗ ಹಾಗೂ ಬಡವರು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ದುಬಾರಿಯಾಗಿದೆ. ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳು ಸಿಗುತ್ತಿಲ್ಲ. ರೋಗಿಗಳನ್ನು ದಾಖಲು ಮಾಡಿಸುವುದು ಕಷ್ಟಸಾಧ್ಯಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಉಸ್ತುವಾರಿ ಹೊತ್ತಿರುವ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮತ್ತಷ್ಟು ಮುತವರ್ಜಿವಹಿಸಬೇಕಾಗಿದೆ ಎಂದು ಮನವಿ ಮಾಡಿದರು.

ಗ್ರಾಮೀಣ ಭಾಗಗಳಲ್ಲಿ ಕರೊನಾ ವ್ಯಾಪಕವಾಗಿ ಭಾದಿಸುತ್ತಿದ್ದು, ಮೊರಾರ್ಜಿ ಶಾಲೆಗಳು, ಸರ್ಕಾರಿ ಹಾಸ್ಟೆಲ್‌ಗಳನ್ನು ಕರೊನಾ ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತಿಸಬೇಕಿದೆ. ತುರ್ತು ಸಿಬ್ಬಂದಿಯನ್ನು ನೇಮಿಸಿ ಕ್ಷಿಪ್ರಗತಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.