ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ) ಚುನಾವಣೆ ಜೂ.26ರಂದು ನಡೆಯಲಿದ್ದು, ಘಟಾನುಘಟಿ ನಾಯಕರುಗಳು ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದು ಚುನಾವಣೆಯ ರೋಚಕತೆಯನ್ನು ಹೆಚ್ಚಿಸಿದೆ.
ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ, ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ, ಎಂಸಿಡಿಸಿಸಿ ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಸಿ.ಬಸವೇಗೌಡ, ಮಾಜಿ ನಿರ್ದೇಶಕರಾದ ಬಿ.ಎನ್.ಸದಾನಂದ, ಅಮಿತ್ ವಿ.ದೇವರಹಟ್ಟಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಸೇರಿದಂತೆ ಹಲವು ಘಟನಾನುಘಟಿ ನಾಯಕರು ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಲು ಪ್ರಾರಂಭಿಸಿದೆ.
ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ತಂದೆ ದೊಡ್ಡಸ್ವಾಮೇಗೌಡ ಸಹಕಾರ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷವಾ ಗಿದೆ. ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಸ್ಪರ್ಧೆ ಮಾಡುತ್ತಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಅಥವಾ ಹಳಬರಿಗೂ ಅವಕಾಶ ಸಿಗುವುದು ಕಡಿಮೆಯಾಗಿದೆ. ಸ್ಪರ್ಧೆ ಮಾಡಿದರೂ ಶಾಸಕರನ್ನು ಎದುರಿಸಿ ಗೆಲ್ಲುವುದು ಕಷ್ಟಕರ ಎನ್ನುವುದು ಗೊತ್ತಾಗಿರುವ ಕಾರಣ ದೂರ ಉಳಿಯುವುದಕ್ಕೂ ಚಿಂತನೆ ನಡೆಸಿದ್ದಾರೆ. ದಿನಾಂಕ ಪ್ರಕಟವಾದ ಬೆನ್ನಲ್ಲೇ ತಮ್ಮ ತಮ್ಮ ಆಪ್ತರನ್ನು ಕರೆಯಿಸಿ ಸಮಾಲೋಚನೆ ನಡೆಸುತ್ತಲೇ ಎದುರಾಳಿಗಳ ಬೆಂಬಲ, ಸಾಮರ್ಥ್ಯವನ್ನು ಗುರುತಿಸಿ ಹೊಸ ದಾಳಗಳನ್ನು ಉರುಳಿಸುವ ಕೆಲಸದಲ್ಲಿ ತೊಡಗಿರುವುದು ಕಂಡುಬಂದಿದೆ.
ಡೆಲಿಗೇಟ್ಸ್‌ಗಳ ಮನವೊಲಿಕೆ: ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರುವ ಡೆಲಿಗೇಟ್ಸ್‌ಗಳ ಮನವೊಲಿಕೆಗೆ ಆಕಾಂಕ್ಷಿಗಳು ಮುಂದಾಗಿದ್ದಾರೆ. ನಿರ್ದೇಶಕ ಸ್ಥಾನಗಳ ಮೇಲೆ ಕಣ್ಣಿಟ್ಟು ಸ್ಪರ್ಧೆಗೆ ಅಣಿಯಾಗಿರುವವರು ಪ್ರತಿನಿಧಿಗಳನ್ನು ಭೇಟಿ ಮಾಡುವುದು, ದೂರವಾಣಿ ಮೂಲಕ ಮಾತನಾಡುವುದು, ಎದುರಾಳಿಗಳ ಸಂಪರ್ಕಕ್ಕೆ ಸಿಗದ ರೀತಿಯಲ್ಲಿ ಓಲೈಕೆ ಮಾಡುತ್ತಿದ್ದಾರೆ. ಒಂದು ಸುತ್ತು ಪ್ರಚಾರ ಮುಗಿಸಿರುವ ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದ ಬಳಿಕ ತಮ್ಮ ಪರ ನಿಷ್ಠೆಯುಳ್ಳ ಮತದಾರರನ್ನು ಜೋಪಾನವಾಗಿ ಕಾಯ್ದಿರಿಸಿಕೊಳ್ಳುವಂತೆ ಮಾಡಲು ಒಂದು ತಂಡವನ್ನೇ ನಿಯೋಜಿಸಿರುವುದು ಗೊತ್ತಾಗಿದೆ.
ಈ ಚುನಾವಣೆಯು ಪಕ್ಷಾತೀತವಾಗಿದ್ದರೂ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗಳು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿರುವು ದರಿಂದ ರಾಜಕೀಯ ಪಕ್ಷಗಳು ಆಡಳಿತ ಹಿಡಿಯಲು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿವೆ. ಇದರಿಂದಾಗಿ ಚುನಾವಣೆಯಲ್ಲಿ ಗೆಲ್ಲಲು ಮೌನವಾಗಿಯೇ ದಾಳಗಳನ್ನು ಉರುಳಿಸುತ್ತಿವೆ. ರಾಜ್ಯದಲ್ಲಿ ಪ್ರಸ್ತುತ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಇರುವ ಹಿನ್ನೆಲೆಯಲ್ಲಿ ಎಂಸಿಡಿಸಿಸಿ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರೆಯುವುದು ನಿಶ್ಚಿತವಾಗಿದ್ದು, ಇದಕ್ಕೆ ಪ್ರತಿತಂತ್ರವನ್ನು ಕಾಂಗ್ರೆಸ್ ನಾಯಕರು ರೂಪಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ರೈತ ಸಮುದಾಯಕ್ಕೆ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸುತ್ತಾ ಬಂದಿರುವ ಎಂಸಿಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಅಧಿಕಾರಾವಧಿ 2023ರ ನವೆಂಬರ್ ತಿಂಗಳಲ್ಲೇ ಮುಕ್ತಾಯಗೊಂಡಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಚುನಾವಣೆಯನ್ನು ಮುಂದೂಡಲಾಗಿತ್ತು. ಇದರಿಂದಾಗಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದ ಪ್ರಕಾರ ಇದೀಗ ಚುನಾವಣೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಗೆ ಜೂ.18 ಅಂತಿಮ ದಿನವಾಗಿದ್ದು, ಜೂ.19 ರಂದು ನಾಮಪತ್ರಗಳ ಪರಿಶೀಲನೆ, 20 ವಾಪಾಸ್ ಪಡೆಯಲು ಅಂತಿಮ ದಿನವಾಗಿದೆ. ಜೂ.26 ರಂದು ಮತದಾನ ನಡೆಯಲಿದೆ.
13 ಕ್ಷೇತ್ರಗಳಿಗೆ ನಾಮಪತ್ರ: ಆಡಳಿತಮಂಡಳಿಯ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 16 ನಿರ್ದೇಶಕರ ಸ್ಥಾನಗಳಲ್ಲಿ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಅಂದರೆ(ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪರವಾಗಿ ಆಯ್ಕೆಯಾಗುವ ಎರಡು ಕ್ಷೇತ್ರಗಳು, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕ್ಷೇತ್ರದಿಂದ ಆಯ್ಕೆಯಾಗಬೇಕಾದ ಒಂದು ಕ್ಷೇತ್ರ) ಹೊರತುಪಡಿಸಿ ಉಳಿದ 13 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಹನ್ನೊಂದು ತಾಲೂಕುಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಮಾಡಬೇಕಾದ 11 ಕ್ಷೇತ್ರಗಳು, ಗೃಹ ನಿರ್ಮಾಣ ಸಹಕಾರ ಕ್ಷೇತ್ರದಿಂದ ಒಂದು, ಇತರೆ ಕ್ಷೇತ್ರಗಳಿಂದ ಒಂದು ಸ್ಥಾನಕ್ಕೆ ಮತದಾನ ನಡೆಯಲಿದೆ. ನ್ಯಾಯಾಲಯವು ಮೂರು ಕ್ಷೇತ್ರಗಳಿಗೆ ಅಂತಿಮ ಆದೇಶ ನೀಡುವ ತನಕ ಬಾಕಿ ಉಳಿಸಿ ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದಾರೆ.
ತಾಲೂಕುವಾರು ವಿವರ: ಮೈಸೂರು ತಾಲೂಕಿನಲ್ಲಿ 26, ನಂಜನಗೂಡಿನಲ್ಲಿ 33, ತಿ.ನರಸೀಪುರದಲ್ಲಿ 32, ಹುಣಸೂರಿನಲ್ಲಿ 15, ಎಚ್.ಡಿ. ಕೋಟೆ 18, ಕೆ.ಆರ್.ನಗರ 24, ಪಿರಿಯಾಪಟ್ಟಣ 26, ಚಾಮರಾಜನಗರ 38, ಗುಂಡ್ಲುಪೇಟೆ 32, ಕೊಳ್ಳೇಗಾಲ 23, ಯಳಂದೂರು 6, ಪಟ್ಟಣ ಸಹಕಾರ ಬ್ಯಾಂಕ್‌ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರಗಳಿಂದ 56, ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕ್‌ಗಳ ಕ್ಷೇತ್ರಗಳಿಂದ 57 ಡೆಲಿಗೇಟ್ಸ್‌ಗಳು (ಮತದಾರರು) ಇದ್ದಾರೆ.