ಮೈಸೂರು: ನಗರದಲ್ಲಿ ಬಿಡಾಡಿ ದನಗಳು ಹಾಗೂ ಹಂದಿಗಳನ್ನು ಸೆರೆ ಹಿಡಿಯಲು ಕ್ರಮ ವಹಿಸುವಂತೆ ಮೇಯರ್ ಶಿವಕುಮಾರ್ ಅಧಿಕಾರಿಗ ಳಿಗೆ ನಿರ್ದೇಶನ ನೀಡಿದರು.
ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಗೋಪಿ, ಪಾಲಿಕೆ ಸಿಬ್ಬಂದಿ ಬಂಡಿಕೇರಿ ಹಾಗೂ ಇಟ್ಟಿಗೂಡು ಕಡೆಗಳಲ್ಲಿ ಮಾತ್ರ ಬಿಡಾಡಿ ದನಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲುತ್ತಿದ್ದು, ಇದರ ಉದ್ದೇಶವೇನು? ಏತಕ್ಕೆ ಉಳಿದ ಕಡೆಗಳಲ್ಲಿ ಸೆರೆ ಹಿಡಿಯುತ್ತಿಲ್ಲ. ಕೆಲವು ಭಾಗದ ಗೋಪಾಲಕರನ್ನು ಮಾತ್ರ ಗುರಿಯಾಗಿಸಿಕೊಂಡು ಬಿಡಾಡಿ ದನಗಳನ್ನು ಸೆರೆ ಹಿಡಿಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ನಗರದ ಎಲ್ಲ ಭಾಗಗಳಲ್ಲೂ ಬಿಡಾಡಿ ದನಗಳು ಹಾಗೂ ಹಂದಿಗಳನ್ನು ಸೆರೆ ಹಿಡಿಯಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ಹಾವಳಿ ನಿಯಂತ್ರಿಸಲು ಕ್ರಮ ವಹಿಸಬೇಕು. ನಗರದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಬೀದಿನಾಯಿಗಳ ಪುನರ್ವಸತಿ ಕೇಂದ್ರ ಕಟ್ಟಡದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಮನುಷ್ಯರ ಮೇಲೆ ದಾಳಿ ನಡೆಸುವ ಹಾಗೂ ಕಾಯಿಲೆ ಬಿದ್ದಿರುವ ನಾಯಿಗಳನ್ನು ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಉಪ ಮೇಯರ್ ಡಾ.ಜಿ. ರೂಪಾ, ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಇದ್ದರು.