ಜಿಲ್ಲೆ

ಮೇಯರ್ ಶಿವಕುಮಾರ್'ರನ್ನು ಅಡ್ಡಗಟ್ಟಿದ ಜೆಡಿಎಸ್ ಸದಸ್ಯರು

ಸದೇಶ್ ಕಾರ್ಮಾಡ್

ಮೈಸೂರು: ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮೇಯರ್ ಶಿವಕುಮಾರ್ ಅವರನ್ನು ಜೆಡಿಎಸ್ ಸದಸ್ಯರು ಅಡ್ಡಗಟ್ಟಿ ಪ್ರತಿಭಟಿಸಿದರು. ಈ ಸಂದರ್ಭ ಮೇಯರ್ ತಳ್ಳಾಟ, ನೂಕಾಟ ದಲ್ಲಿ ಸಿಲುಕಿದರು.

ಸಭೆ ಮುಕ್ತಾಯಗೊಳ್ಳಲು ಕೇವಲ 10 ನಿಮಿಷ ಬಾಕಿ ಇರುವ ಸಂದರ್ಭ ಇತರೆ ವಿಷಯ ಚರ್ಚೆಗೆ ಅವಕಾಶ ನೀಡಬೇಕು ಎಂದು ಜೆಡಿಎಸ್‌ನ ಎಸ್‌ಬಿಎಂ ಮಂಜು ಪಟ್ಟು ಹಿಡಿದರು. ಈ ಸಂದರ್ಭ ಕಾರ್ಯಸೂಚಿಯ ವಿಷಯ ಕೈಗೆತ್ತಿಕೊಳ್ಳಲು ಮೇಯರ್ ಮುಂದಾದ ಸಂದರ್ಭ ಎಸ್‌ಬಿಎಂ ಮಂಜು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ಸಂದರ್ಭ ಜೆಡಿಎಸ್‌ನ ಉಳಿದ ಸದಸ್ಯರು ಸಹ ಸದನದ ಬಾವಿಗಿಳಿದು ಪ್ರತಿಭಟಿಸಿದರು.

ಈ ಗದ್ದಲದ ವಾತಾವರಣದಲ್ಲಿಯೇ ಕಾರ್ಯಸೂಚಿಯಲ್ಲಿದ್ದ ವಿವಿಧ ವಿಷಯಗಳಿಗೆ ಮೇಯರ್ ಚರ್ಚೆ ಇಲ್ಲದೆ ಅಂಗೀಕಾರ ನೀಡಿ ಸಭೆಯನ್ನು ಮುಕ್ತಾಯಗೊಳಿಸಿ ಹೊರ ನಡೆಯಲು ಮುಂದಾದಾಗ ಮೇಯರ್ ಅವರನ್ನು ಅಡ್ಡಗಟ್ಟಿದ ಜೆಡಿಎಸ್ ಸದಸ್ಯರು ಆಕ್ರೋಶ ಹೊರಹಾಕಲು ಪ್ರಾರಂಭಿಸಿದರು. ಈ ಸಂದರ್ಭ ಮೇಯರ್ ರಕ್ಷಣೆಗೆ ಧಾವಿಸಿದ ಬಿಜೆಪಿ ಸದಸ್ಯರು ಮೇಯರ್ ಅವರನ್ನು ಸದನದಿಂದ ಹೊರ ಕರೆತರುವಲ್ಲಿ ಯಶಸ್ವಿಯಾದರು.