ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ದೇರೆಬೈಲ್ ವಾರ್ಡ್‌ನ ಮನೋಜ್‌ಕುಮಾರ್
ಮತ್ತು ಉಪ ಮೇಯರ್ ಸ್ಥಾನಕ್ಕೆ ಬೋಳಾರ ವಾರ್ಡ್‌ನ ಭಾನುಮತಿ ಅವರನ್ನು ಆಡಳಿತ ಪಕ್ಷ ಬಿಜೆಪಿ ಆಯ್ಕೆ ಮಾಡಿದೆ.
ಬುಧವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಪೋರೇಟರ್‌ಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಜಿಲ್ಲಾ ಬಿಜೆಪಿಯಿಂದ ಅಭ್ಯರ್ಥಿಗಳ ಹೆಸರು ಘೋಷಿಸಲಾಯಿತು.
ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ‌್ವಾರ, ಕಿಶೋರ್ ಕುಮಾರ್ ಬೊಟ್ಯಾಡಿ, ಹಿರಿಯ ನಾಯಕರಾದ ರವಿಶಂಕರ ಮಿಜಾರು, ನಿತಿನ್ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.
ಮೇಯರ್ ಹುದ್ದೆ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಉಪ ಮೇಯರ್ ಹುದ್ದೆ ಹಿಂದುಳಿದ ವರ್ಗ ಎ ಮಹಿಳೆ ಮೀಸಲು
ನಿಗದಿಯಾಗಿದೆ. 60 ಮಂದಿ ಸದಸ್ಯ ಬಲದ ಪಾಲಿಕೆಯಲ್ಲಿ 44 ಸದಸ್ಯರ ಜತೆ ಓರ್ವ ಸಂಸದ ಹಾಗೂ ಇಬ್ಬರು ಶಾಸಕರ ಮತ ಹೊಂದಿರುವ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ ಸದಸ್ಯರ ಪೈಕಿ ಭರತ್ ಕುಮಾರ್.ಎಸ್., ಮನೋಜ್‌ಕುಮಾರ್ ಮತ್ತು ಸುನೀತಾ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದರು.
ಈ ಹಿಂದೆ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು
ಮೇಯರ್ ಆಗಿದ್ದರೆ, ಮಂಗಳೂರು ಉತ್ತರ ವ್ಯಾಪ್ತಿಯ ಜಯಾನಂದ ಅಂಚನ್ ಮೇಯರ್ ಆಗಿದ್ದರು. ಹಾಗಾಗಿ ಈ ಬಾರಿ ಮಂಗಳೂರು ಉತ್ತರಕ್ಕೆ ಆದ್ಯತೆ ನೀಡಿದ ಕಾರಣ ಮನೋಜ್ ಕುಮಾರ್ ಅವರಿಗೆ ಅದೃಷ್ಟ ಒಲಿಯಲಿದೆ . ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿಯ ಕಾರ್ಪೋರೇಟರ್ ಇಲ್ಲದ ಕಾರಣ ಈ ಬಾರಿ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಲಿದೆ.
ಹಿಂದುಳಿದ ವರ್ಗ ಎ ಮಹಿಳೆ ಮೀಸಲು ನಿಗದಿಯಾಗಿರುವ ಉಪ ಮೇಯರ್ ಸ್ಥಾನಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ
ಭಾನುಮತಿ ಅವರನ್ನು ಪಕ್ಷ ಆಯ್ಕೆ ಮಾಡಿದೆ. ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಬಂದರ್ ವಾರ್ಡ್‌ನ ಕಾರ್ಪೋರೇಟರ್ ಜೀನತ್ ಸಂಶುದ್ದೀನ್ ಅವರು ಮಾತ್ರ ಅರ್ಹತೆ ಪಡೆದಿದ್ದಾರೆ.
ನಗರ ಯೋಜನೆ ಸ್ಥಾಯಿ ಸಮಿತಿಗೆ ವೀಣಾ ಮಂಗಳ, ಆರೋಗ್ಯ ಸ್ಥಾಯಿ ಸಮಿತಿಗೆ ಸುಮಿತ್ರ ಕರಿಯ, ತೆರಿಗೆ, ಹಣಕಾಸು ಸ್ಥಾಯಿ ಸಮಿತಿಗೆ ಮನೋಹರ್ ಶೆಟ್ಟಿ ಮತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಸರಿತಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ ಎನ್ನುವ ಮಾಹಿತಿ ಇದೆ.
ಮಂಗಳೂರು ಮಹಾನಗರ ಪಾಲಿಕೆ 25ನೇ ಅವಧಿಯ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆ ಸೆ.19ರಂದು ಬೆಳಗ್ಗೆ 11ರಿಂದ ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.