ಜಿಲ್ಲೆ

ಮಂಗಳೂರು ಮಹಾ ನಗರ ಪಾಲಿಕೆ : ಸುಧೀರ್ ಶೆಟ್ಟಿ ಕಣ್ಣೂರು ನೂತನ ಮೇಯರ್

Mangaluru - Hariprasad Rai




ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಹಿರಿಯ ಸದಸ್ಯ,
ಕೊಡಿಯಾಲ್‌ಬೈಲ್‌ನ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಚುನಾಯಿತರಾದರು. ಉಪ ಮೇಯರ್ ಆಗಿ ಪಣಂಬೂರು ವಾರ್ಡ್‌ನ ಬಿಜೆಪಿ ಕಾರ್ಪೋರೇಟರ್ ಸುನೀತಾ ಅವಿರೋಧವಾಗಿ ಆಯ್ಕೆಯಾದರು.
ಮೇಯರ್ ಸ್ಥಾನ (ಸಾಮಾನ್ಯ ಮೀಸಲು)ಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಧೀರ್ ಶೆಟ್ಟಿ 47 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ನವೀನ್ ಡಿಸೋಜಾ 14 ಮತ ಪಡೆದರು. ಎಸ್‌ಡಿಪಿಐಯ ಇಬ್ಬರು ಸದಸ್ಯರು ಮತ ಚಲಾಯಿಸದೆ ತಟಸ್ಥರಾಗಿ ಉಳಿದರು.
ಉಪ ಮೇಯರ್ ಹುದ್ದೆ ಎಸ್‌ಸಿ ಮಹಿಳೆ ಮೀಸಲಾತಿ ಹೊಂದಿದ್ದು, ಪಣಂಬೂರು ವಾರ್ಡ್‌ನ ಬಿಜೆಪಿ ಕಾರ್ಪೋರೇಟರ್ ಸುನೀತಾ ಮಾತ್ರ ಸ್ಪರ್ಧೆಗೆ ಅರ್ಹರಾಗಿದ್ದರು. ಕಾಂಗ್ರೆಸ್‌ನಲ್ಲಿ ಅರ್ಹ ಮೀಸಲು ಅಭ್ಯರ್ಥಿಗಳಿಲ್ಲದ ಕಾರಣ ಸುನೀತಾ ಅವಿರೋಧ
ಆಯ್ಕೆಗೊಂಡರು. ಪಾಲಿಕೆಯ 4 ಸ್ಥಾಯಿ ಸಮಿತಿಗಳ 28 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
60 ಮಂದಿ ಸದಸ್ಯ ಬಲದ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ-44, ಕಾಂಗ್ರೆಸ್-14 ಮತ್ತು ಎಸ್‌ಡಿಪಿಐ -2 ಸದಸ್ಯರಿದ್ದಾರೆ. ದ.ಕ.ಸಂಸದ, ಶಾಸಕರಾದ ಡಿ.ವೇದವ್ಯಾಸ ಕಾಮತ್ ಮತ್ತು ಡಾ. ವೈ.ಭರತ್ ಶೆಟ್ಟಿ ಪಕ್ಷದ ಅಭ್ಯರ್ಥಿ ಪರ ಚಲಾಯಿಸಿದರು. ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ (ಕಾಂಗ್ರೆಸ್) ಮತ್ತು ಬಿ.ಎಂ. ಫಾರೂಕ್ (ಜೆಡಿಎಸ್)ಗೈರಾಗಿದ್ದರು.
ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಚುನಾವಣಾಧಿಕಾರಿಯಾಗಿದ್ದರು. ಮನಪಾ ಆಯುಕ್ತ ಆನಂದ್.ಸಿ.ಎಲ್. ಉಪಸ್ಥಿತರಿದ್ದರು.