ಜಿಲ್ಲೆ

ಮನಪಾ ಬಾಡಿಗೆ ಪಾವತಿ ಆನ್‌ಲೈನ್, ಹೊಸ ವೆಬ್ ಅಪ್ಲಿಕೇಶನ್ ತಯಾರಿ ಡಿಜಿಟಲೀಕರಣದತ್ತ ಪಾಲಿಕೆ ಹೆಜ್ಜೆ

ಮಂಗಳೂರು: ಮಂಗಳೂರು ನಗರ ಪಾಲಿಕೆ ಒಡೆತನಕ್ಕೆ ಒಳಪಟ್ಟ ಮಾರುಕಟ್ಟೆ ಮಳಿಗೆ, ವಾಣಿಜ್ಯ ಮಳಿಗೆ, ಪಾಲಿಕೆ ಕಟ್ಟಡಗಳ ವ್ಯಾಪಾರಿಗಳು ಇನ್ನು ಆನ್‌ಲೈನಲ್ಲೇ ಬಾಡಿಗೆ ಪಾವತಿ ಮಾಡಬಹುದು. ಡಿಜಿಟಲೀಕರಣದತ್ತ ಪಾಲಿಕೆ ಹೆಜ್ಜೆ ಹಾಕ್ದಿದ್ದು, ಹೊಸ ವೆಬ್ ಅಪ್ಲಿಕೇಶನ್ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ, ನೀರಿನ ಬಿಲ್ ಪಾವತಿ, ಜನನ ಮರಣ ಪ್ರಮಾಣ ಪತ್ರ, ಇ-ಖಾತಾ ಸೇರಿದಂತೆ ವಿವಿಧ ಸೇವೆಗಳನ್ನು ಆನ್‌ಲೈನ್ ಮಾಡಿರುವ ಪಾಲಿಕೆ ಇದೀಗ ಮಳಿಗೆಗಳ ಬಾಡಿಗೆ ಪಾವತಿಯನ್ನೂ ಡಿಜಿಟಲೀಕೃತಗೊಳಿಸುತ್ತಿದೆ. ಈವರೆಗೆ ವ್ಯಾಪಾರಿಗಳು ಪಾಲಿಕೆಗೆ ಬಂದು, ನಿಗದಿತ ನಮೂನೆಗಳಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಸೇವಾ ಕೇಂದ್ರ ಹಾಗೂ ಬ್ಯಾಂಕ್‌ಗಳಲ್ಲಿ ಹಣ ಪಾವತಿ ಮಾಡಬೇಕಿತ್ತು. ಕೆಲವರು ನಿಗದಿತ ಸಮಯದಲ್ಲಿ ಬಾಡಿಗೆ ಪಾವತಿ ಮಾಡುತ್ತಿರಲಿಲ್ಲ. ಇದರಿಂದಾಗಿ ಪಾಲಿಕೆ ಆದಾಯಕ್ಕೂ ಹೊಡೆತ ಬಿದ್ದಿತ್ತು. ಇದೇ ಕಾರಣಕ್ಕೆ ಸದ್ಯ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆಗೆ ಬದಲಾಗಲು ಪಾಲಿಕೆ ನಿರ್ಧಾರ ಮಾಡಿದೆ. ಅದರಂತೆ ಆನ್‌ಲೈನ್ ಮುಖೇನ ಬಳಸಿಕೊಳ್ಳಲು ಹೊಸ ವೆಬ್ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ.

ಮಂಗಳೂರು ಪಾಲಿಕೆಗೆ ಅಧೀನಕ್ಕೆ ಒಳಪಟ್ಟ 26 ಮಾರುಕಟ್ಟೆ ಮಳಿಗೆಗಳು, 3 ವಾಣಿಜ್ಯ ಮಳಿಗೆಗಳು ಹಾಗೂ ಕೇಂದ್ರ ಕಚೇರಿ ಕಟ್ಟಡ ಸೇರಿದಂತೆ ಇತರೇ ಪಾಲಿಕೆ ಕಟ್ಟಡಗಳ 1050 ಕೊಠಡಿಗಳ ಮಾಸಿಕ ಬಾಡಿಗೆಗಳಿನ್ನು ಆನ್‌ಲೈನ್ ಆಗಲಿದೆ. ಈ ನಿಟ್ಟಿನಲ್ಲಿ ಮಾಸಿಕ ಬಾಡಿಗೆ ವಸೂಲಾತಿ, ಹಿಂದಿನ ಬಾಕಿ ವಸೂಲಾತಿ, ಪಾವತಿಸಿರುವ ಠೇವಣಿಗಳ ವಿವರ, ವಸೂಲಾತಿ ಇತರೇ ವಿಷಯಗಳನ್ನು ಆನ್‌ಲೈನ್‌ಗೆ ಜೋಡಣೆ ಪ್ರಕ್ರಿಯೆ ಸಾಗುತ್ತಿದೆ. ಇದರಿಂದ ಆದಾಯದ ನಿಖರ ವಿವರಗಳನ್ನು ಸಂಗ್ರಹಿಸಲು ಸಾಧ್ಯವಾಗಲಿದೆ.

ಭವನಗಳಿಗೆ ಆನ್‌ಲೈನ್ ಬುಕ್ಕಿಂಗ್

ಮಂಗಳೂರು ಪಾಲಿಕೆಗೆ ಒಳಪಟ್ಟ ಭವನಗಳಾದ ಕುದ್ಮುಲ್ ರಂಗರಾವ್ ಪುರಭವನ, ಉರ್ವದಲ್ಲಿರುವ ಅಂಬೇಡ್ಕರ್ ಭವನದ ಬುಕ್ಕಿಂಗ್ ಇನ್ನು ಆನ್‌ಲೈನ್‌ನಲ್ಲೇ ಮಾಡಬಹುದು. ಸದ್ಯದಲ್ಲೇ ಅಭಿವೃದ್ಧಿಗೊಳ್ಳಲಿರುವ ಹೊಸ ವೆಬ್ ಆಪ್ಲಿಕೇಶನ್‌ನಲ್ಲಿ ಈ ಆಯ್ಕೆ ನಮೂದು ಮಾಡಲು ಪಾಲಿಕೆ ನಿರ್ಧರಿಸಿದೆ. ನಿಗದಿಗೊಂಡ ಸರ್ಕಾರಿ ಕಾರ್ಯಕ್ರಮಗಳು ಹೊರತುಪಡಿಸಿ, ಉಳಿದ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮ ದಿನಾಂಕ ನಿಗದಿ ಸೇರಿದಂತೆ ಬಾಡಿಗೆ ಹಣವನ್ನು ಆನ್‌ಲೈನ್‌ನಲ್ಲೇ ಪಾವತಿ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.

----------------------

ಪಾಲಿಕೆ ಒಡೆತನಕ್ಕೆ ಒಳಪಟ್ಟಂತಹ ಮಾರುಕಟ್ಟೆ ಮಳಿಗೆ, ವಾಣಿಜ್ಯ ಮಳಿಗೆ, ಪಾಲಿಕೆ ಕಟ್ಟಡಗಳ ಮಾಲೀಕರು ಆನ್‌ಲೈನಲ್ಲೇ ಬಾಡಿಗೆ ಪಾವತಿ ಮಾಡಲು ಹೊಸ ವೆಬ್ ಅಪ್ಲಿಕೇಶನ್ ಸಿದ್ದಪಡಿಸಲಾಗುತ್ತಿದೆ. ಪಾಲಿಕೆ ಹಲವು ಯೋಜನೆಗಳು ಆನ್‌ಲೈನ್ ಆಗುತ್ತಿದ್ದು, ವ್ಯಾಪಾರಿಗಳು ಮಳಿಗಳ ಬಾಡಿಗೆ ಪಾವತಿಗೆ ಇನ್ನು, ಪಾಲಿಕೆಗೆ ಬರಬೇಕೆಂದಿಲ್ಲ. ತಮ್ಮ ಅಂಗಡಿ ನಂಬರ್ ಹಾಕಿ ಪ್ರತಿ ತಿಂಗಳು ಆನ್‌ಲೈನ್‌ನಲ್ಲಿ ಬಾಡಿಗೆ ಪಾವತಿ ಮಾಡಬಹುದು.

ಪ್ರೇಮಾನಂದ ಶೆಟ್ಟಿ, ಮನಪಾ ಮುಖ್ಯ ಸಚೇತಕ