ಮೈಸೂರು: ನಗರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಅಳವಡಿಸಿರುವ 11 ಕೆ.ವಿ. ವಿದ್ಯುತ್ ಭೂಗತ ಕೇಬಲ್(ಯುಜಿ)ನಿಂದ ನಗರ ಪಾಲಿಕೆ ಎದುರಿಸುತ್ತಿರುವ ಸಮಸ್ಯೆ ಕುರಿತು ಚರ್ಚಿಸಿ ಬಗೆಹರಿಸಿಕೊಳ್ಳುವ ಸಲುವಾಗಿ ನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬುಧವಾರ ಪಾಲಿಕೆ ಹಾಗೂ ಸೆಸ್ಕ್ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು.
ಯುಜಿ ಕೇಬಲ್ ಎಲ್ಲೆಲ್ಲಿ ಹಾದು ಹೋಗಿದೆ ಎಂಬ ಮಾಹಿತಿ ಪಾಲಿಕೆ ಬಳಿಯಲ್ಲಿ ಇಲ್ಲ. ಈ ಕುರಿತು ಸೆಸ್ಕ್ ಸ್ಥಳೀಯ ಅಧಿಕಾರಿಗಳ ಬಳಿ ಮಾಹಿತಿ ಕೋರಿದರೆ ಅವರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ನಗರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಯುಜಿಡಿ, ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿಗೆ ನೆಲವನ್ನು ಅಗೆದ ಸಂದರ್ಭ ಯುಜಿ ಕೇಬಲ್ ತುಂಡರಿಸಿದ ಉದಾಹರಣೆಗಳು ಇವೆ. ಪಾಲಿಕೆ ಕಾಮಗಾರಿ ಕೈಗೊಳ್ಳುವ ಸಂದರ್ಭ ಯುಜಿ ಕೇಬಲ್‌ಗಳು ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದು, ಕೂಡಲೇ ಯುಜಿ ಕೇಬಲ್ ಹಾದು ಹೋಗಿರುವ ಮಾರ್ಗಗಳ ಸಂಪೂರ್ಣ ಮಾಹಿತಿ ನೀಡುವಂತೆ ಮೇಯರ್ ಶಿವಕುಮಾರ್ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಅವರಲ್ಲಿ ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಶ್ರೀಧರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕನಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ನಾನು ಸಹ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ನಗರ ಸ್ಥಳೀಯ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಅರಿವು ಇದೆ. ನಗರದಲ್ಲಿ ಯುಜಿ ಕೇಬಲ್ ಅಳವಡಿಸುವ ಕಾಮಗಾರಿ ಶೇ.90 ರಷ್ಟು ಮುಕ್ತಾಯಗೊಂಡಿದ್ದು, ಯುಜಿ ಕೇಬಲ್ ಹಾದು ಹೋಗಿರುವ ಮಾರ್ಗಗಳ ಸಂಪೂರ್ಣ ಮಾಹಿತಿಯನ್ನು ಪಾಲಿಕೆಗೆ ನೀಡಲಾಗುವುದು. ಪಾಲಿಕೆಯ ತುರ್ತು ಕಾಮಗಾರಿಗಳು ಇದ್ದರೆ ನಮಗೆ ಎರಡು ದಿನಗಳ ಮುಂಚಿತವಾಗಿ ತಿಳಿಸಿ, ಸ್ಥಳದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ರೀತಿಯ ಅನಾಹುತ ಆಗದಂತೆ ಎಚ್ಚರ ವಹಿಸುತ್ತೇವೆ ಎಂದರು.
ಕಾಮಗಾರಿ ಸಂದರ್ಭ ಯುಜಿ ಕೇಬಲ್‌ಗೆ ಆಗುವ ಹಾನಿಗೆ ಸಂಬಂಧಿಸಿದಂತೆ ಪಾಲಿಕೆಯ ಗುತ್ತಿಗೆದಾರರಿಂದ ಸೆಸ್ಕ್ ಅಧಿಕಾರಿಗಳು ದಂಡ ವಸೂಲಾತಿ ಮಾಡುತ್ತಿದ್ದು, ದಂಡ ವಸೂಲಾತಿಯನ್ನು ನಿಲ್ಲಿಸಬೇಕು. ಯುಜಿ ಕೇಬಲ್ ಹಾದು ಹೋಗಿರುವ ಮಾರ್ಗದ ಕುರಿತು ಸರಿಯಾದ ಮಾಹಿತಿ ನೀಡಿದ್ದರೆ ಈ ರೀತಿಯ ಹಾನಿ ಆಗುತ್ತಿರಲಿಲ್ಲ ಎಂದು ಮೇಯರ್ ಶಿವಕುಮಾರ್ ಹೇಳಿದರು.
ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಮಾತನಾಡಿ, ಕೆಲವು ಕಡೆಗಳಲ್ಲಿ ಯುಜಿಡಿ ಹಾಗೂ ಕುಡಿಯುವ ನೀರಿನ ಮಾರ್ಗದ ಮೇಲೆ ಯುಜಿ ಕೇಬಲ್ ಅಳವಡಿಸಲಾಗಿದೆ. ಜಯದೇವ, ಟ್ರಾಮಾಕೇರ್ ಸೆಂಟರ್ ಬಳಿಯಲ್ಲಿ ಮೋರಿಯ ಪಕ್ಕದಲ್ಲಿಯೇ ಯುಜಿ ಕೇಬಲ್ ಅಳವಡಿಸ ಲಾಗಿದೆ. ಅಲ್ಲದೆ ಟಿಸಿಗಳನ್ನು ಫುಟ್‌ಪಾತ್ ಬಳಿಯಲ್ಲಿ ಹಾಕಲಾಗಿದೆ, ಎಲ್ಲೆಂದರಲ್ಲಿ ಫೀಡರ್ ಬಾಕ್ಸ್‌ಗಳನ್ನು ಹಾಕಲಾಗಿದೆ. ಸೆಸ್ಕ್ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ಓಡಾಡಲು ಸಮಸ್ಯೆಯಾಗಿದೆ. ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಮಾತನಾಡಿ, ಪಾಲಿಕೆ ವಲಯ ಕಚೇರಿ 6ರಲ್ಲಿ 11 ಕೆ.ವಿ. ವಿದ್ಯುತ್ ಯುಜಿ ಕೇಬಲ್ ಅಳವಡಿಸಲು ಅನುಮತಿ ಪಡೆದು ವಲಯ 1 ಕಚೇರಿ ವ್ಯಾಪ್ತಿಯಲ್ಲಿ ಯುಜಿ ಕೇಬಲ್ ಅಳವಡಿಸಲಾಗಿದೆ. ಈ ಬಗ್ಗೆ ಪಾಲಿಕೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಸೆಸ್ಕ್ ಅಧಿಕಾರಿಗಳು ವಂಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪ ಮೇಯರ್ ಡಾ.ಜಿ.ರೂಪಾ, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮಾಜಿ ಮೇಯರ್ ಅಯೂಬ್ ಖಾನ್ ಹಾಗೂ ಇತರರು ಇದ್ದರು.