ಮಂಗಳೂರು: ಎಂಸಿಸಿ ಬ್ಯಾಂಕಿನ ಕಾರ್ಯಕ್ಷೇತ್ರ ವಿಸ್ತರಣೆ, ಬ್ಯಾಂಕಿಂಗ್ ಸೇವೆಯಲ್ಲಿ ಸಿಬ್ಬಂದಿಯ ಜ್ಞಾನ -ಕೌಶಲ ಅಭಿವೃದ್ದಿ, ಗ್ರಾಹಕ ಸೇವೆಯಲ್ಲಿ ಸುಧಾರಣೆ, ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಶಿಕ್ಷಣ, ವಾಹನ ಮತ್ತು ಎಂಎಸ್‌ಎಂಇ ಉದ್ಯಮ ಸಾಲ ಮತ್ತು ಸ್ವತಂತ್ರ ಯುಪಿಐ ಜತೆಗೆ ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶವಿದೆ ಎಂದು ಮಂಗಳೂರು ಕೆಥೊಲಿಕ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.
ಎಂಸಿಸಿ ಬ್ಯಾಂಕ್‌ನ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಹಕರ ಅಹವಾಲುಗಳನ್ನು ತುರ್ತು ವಿಲೇ ಮಾಡಲು ವಿಶೇಷ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸಲಾಗುವುದು ಎಂದರು.
ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಎಂಸಿಸಿ ಬ್ಯಾಂಕಿನಲ್ಲಿ ಶಿಕ್ಷಣ, ವಾಹನ, ಎಂಎಸ್‌ಎಂಇ ಉದ್ಯಮ ಸಾಲಗಳು ಕಡಿಮೆ ಮತ್ತು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಲಭ್ಯವಿದೆ. ಸಾಲ ಮಂಜೂರಾತಿ ಪ್ರಕ್ರಿಯೆತ್ವರಿತ ವೇಗದಲ್ಲಿ ನಡೆಯುತ್ತಿದೆ. ಸಿಇಟಿ, ನೀಟ್ ಮತ್ತಿತರ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಶಿಕ್ಷಣ ಸಾಲಕ್ಕೆ ನಮ್ಮ ಬ್ಯಾಂಕ್ ವಿಶೇಷ ತ್ತು ನೀಡುತ್ತಿದ್ದು, ಸೀಮಿತ ಅವಧಿಗೆ 10 ಲಕ್ಷ ರೂ.ವರೆಗಿನ ಶಿಕ್ಷಣ ಸಾಲ ಶೂನ್ಯ ಪ್ರೊಸೆಸಿಂಗ್ ಫೀಸ್‌ನಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳ್ಳಲಾಗುವುದು. ಸಮಾಜದ ಹೆಚ್ಚೆಚ್ಚು ವಿದ್ಯಾರ್ಥಿಗಳು ನಮ್ಮ ಬ್ಯಾಂಕಿನಿಂದ ಶಿಕ್ಷಣ ಸಾಲ ಪಡೆದು, ಉನ್ನತ ಶಿಕ್ಷಣದ ಕನಸು ಸಾಕಾರಗೊಳಿಸಬೇಕು ಎಂದು ಹೇಳಿದರು.
ಸಂಪೂರ್ಣ ಡಿಜಿಟಲೀಕರಣ
ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ನಮ್ಮ ಸಾಕಷ್ಟು ಗ್ರಾಹಕರು ಆಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳುತ್ತಿದ್ದರೂ, ಸ್ವತಂತ್ರ ಯುಪಿಐ ವ್ಯವಸ್ಥೆ ಇಲ್ಲದಿರುವುದರಿಂದ ಕೆಲವೊಂದು ವಿಶೇಷ ಡಿಜಿಟಲ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಪ್ರಕ್ರಿಯೆ ಆರಂಭಗೊಂಡಿದ್ದು, ಸದರಿ ವಿತ್ತೀಯ ವರ್ಷದಲ್ಲಿ ಬ್ಯಾಂಕಿನ ಎಲ್ಲ ವಿತ್ತೀಯ ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ ಎಂದು ಅನಿಲ್ ಲೋಬೊ ತಿಳಿಸಿದರು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಡಾ.ಜೆರಾಲ್ಡ್ ಪಿಂಟೊ ಕಲ್ಯಾಣ್‌ಪುರ, ಆಂಡ್ರೂೃ ಡಿಸೋಜ ಪಾಲಡ್ಕ, ಜೋಸೆಫ್ ಎಂ., ಅನಿಲ್ ಪತ್ರಾವೊ ದೇರೆಬೈಲ್, ಡೇವಿಡ್ ಡಿಸೋಜ ಬಜ್ಪೆ, ಎಲ್‌ರೊ ಕಿರಣ್ ಕ್ರಾಸ್ಟೊ ಗಂಗೊಳ್ಳಿ, ಜೆ.ಪಿ.ರೋಡ್ರಿಗಸ್ ಪುತ್ತೂರು, ರೋಶನ್ ಡಿಸೋಜ ಮುಡಿಪು, ಹೆರಾಲ್ಡ್ ಜಾನ್ ಮೊಂತೇರೊ ಕೆಲರಾಯ್, ಐರಿನ್ ರೆಬೆಲ್ಲೊ ಕುಲಶೇಖರ, ಡಾ.ಫ್ರೀಡಾ ಫ್ಲಾವಿಯಾ ಡಿಸೋಜ ಬಳ್ಕುಂಜೆ, ಮೆಲ್ವಿನ್ ಆಕ್ವಿನಸ್ ವಾಸ್ ಮಿಲಾಗ್ರಿಸ್, ವಿನ್ಸೆಂಟ್ ಅನಿಲ್ ಲಸ್ರಾದೊ ಬಂಟ್ವಾಳ ಉಪಸ್ಥಿತರಿದ್ದರು.
ಸಮಸ್ತ ಕರ್ನಾಟಕಕ್ಕೆ ಕಾರ್ಯವ್ಯಾಪ್ತಿ ವಿಸ್ತರಣೆ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬ್ಯಾಂಕ್ ಸಂಪೂರ್ಣ ಆಧುನೀಕೃತ 16 ಶಾಖೆಗಳನ್ನು ಹೊಂದಿದೆ ಎಂದು ಅನಿಲ್ ಲೋಬೊ ಹೇಳಿದರು. ಹಿಂದಿನ ವಿತ್ತೀಯ ವರ್ಷದಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಈ ಐದು ಜಿಲ್ಲೆಗಳಿಗೆ ವ್ಯವಹಾರ ವಿಸ್ತರಿಸುವ ಅನುಮತಿ ದೊರಕಿದ್ದು, ಶಾಖೆ ತೆರೆಯುವ ಕೆಲಸ ಪ್ರಗತಿಯಲ್ಲಿದೆ. ಸಾಧ್ಯವಾದರೆ ಜಿಲ್ಲಾವಾರು ಪ್ರಾದೇಶಿಕ ಕಚೇರಿ ತೆರೆದು ವಿಸ್ತರಣೆಯ ಕೆಲಸಕ್ಕೆ ಚುರುಕು ನೀಡಲಾಗುವುದು. ಮುಂದಿನ ವರ್ಷಗಳಲ್ಲಿ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಸಮಸ್ತ ಕರ್ನಾಟಕಕ್ಕೆ ತಲುಪಿಸುವ ಕನಸೂ ಇದೆ ಎಂದು ಹೇಳಿದರು.