ಜಿಲ್ಲೆ

ನಾವೇನು ಉಚಿತವಾಗಿ ಅಕ್ಕಿ ಕೊಡುವಂತೆ ಕೇಂದ್ರದ ಬಳಿ ಕೇಳಿರಲಿಲ್ಲ: ಎಂ.ಬಿ. ಪಾಟೀಲ್

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡವರಿಗೆ ವಿತರಿಸಲು ಅಗತ್ಯವಿರುವ ಅಕ್ಕಿಯನ್ನು ನಾವು ಕೇಂದ್ರ ಸರ್ಕಾರದಿಂದ ಖರೀದಿಸಲು ಕೇಳಿದ್ದೇವೆಯೇ ಹೊರತು, ಪುಕ್ಕಟೆಯಾಗಿ ಏನೂ ಕೇಳಿರಲಿಲ್ಲ. ಆದರೆ ಅವರು ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ತನ್ನ ಬಡಜನ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ಅನ್ನಭಾಗ್ಯ ಯೋಜನೆಯ ಅಗತ್ಯದ ಬಗ್ಗೆ ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಹೇಳಿದ್ದೇವೆ. ಇನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ದನಿ ಎತ್ತಬೇಕು. ದೇವರು ಇನ್ನಾದರೂ ಅವರಿಗೆ ಸದ್ಬುದ್ಧಿಯನ್ನು ಕೊಡಲಿ ಅಷ್ಟೇ' ಎಂದರು.

ಕಾಂಗ್ರೆಸ್ ಸರ್ಕಾರವು ಚುನಾವಣೆ ಹೊತ್ತಿನಲ್ಲೇ ಅನ್ನಭಾಗ್ಯ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಇವುಗಳನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ. ಬಡವರ ಹಸಿವು ನೀಗಿಸುವಂತಹ ಅನ್ನಭಾಗ್ಯ ಯೋಜನೆಗೆ ಮೊದಲು ಅಕ್ಕಿ ಕೊಡುವುದಾಗಿ ಹೇಳಿದ ಕೇಂದ್ರದ ಬಿಜೆಪಿ ಸರ್ಕಾರ, ಈಗ ಅದರಿಂದ ಹಿಂದೆ ಸರಿದಿರುವುದು ಅವರ ಸಣ್ಣತನ ತೋರಿಸುತ್ತಿದೆಯಷ್ಟೇ ಎಂದು ಟೀಕಿಸಿದರು.

ಏಕಗವಾಕ್ಷಿ ವ್ಯವಸ್ಥೆ ಬಲವರ್ಧನೆ

ರಾಜ್ಯದಲ್ಲಿ ಪಾರದರ್ಶಕ ಮತ್ತು ಕಾನೂನುಬದ್ಧ ರೀತಿಯಲ್ಲಿ ಬಂಡವಾಳ ಹೂಡಿ, ಉದ್ಯೋಗ ಸೃಷ್ಟಿ ಮಾಡಲು ಯಾರೇ ಮುಂದೆ ಬಂದರೂ ಅವರನ್ನು ಸ್ವಾಗತಿಸಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ಆದರೆ ನಾನು ಪ್ರಾಸಂಗಿಕವಾಗಿ ಅದಾನಿ ಹೆಸರು ಹೇಳಿದ್ದನ್ನೇ ಇಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿರುವುದು ಕ್ಷುಲ್ಲಕತನ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ಹೂಡಿಕೆಗೆ ಸರಾಗ ವ್ಯವಸ್ಥೆ ಇರಲು ಏಕಗವಾಕ್ಷಿ ವ್ಯವಸ್ಥೆ ಪರಿಣಾಮಕಾರಿಯಾಗಿರಬೇಕು. ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಉದ್ಯಮಕ್ಕೆ ಪರವಾನಗಿ ನೀಡಲು ಅಗತ್ಯವಿರುವ ಎಲ್ಲ ಇಲಾಖೆಗಳನ್ನೂ ಒಂದೆಡೆ ತಂದು, ಸರಳ ವ್ಯವಸ್ಥೆಯನ್ನು ಇಟ್ಟುಕೊಳ್ಳಲಾಗಿದೆ. ನಮ್ಮಲ್ಲೂ ಅಂತಹ ವ್ಯವಸ್ಥೆ ಬರಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.