ಜಿಲ್ಲೆ

ವಲಯ ಕಚೇರಿಗೆ ಮೇಯರ್ ಭೇಟಿ, ಅಧಿಕಾರಿಗಳ ಕಾರ್ಯವೈಖರಿ ವೀಕ್ಷಣೆ

Dharwada - Basavaraj Idli

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಡಳಿತದಲ್ಲಿ ಚುರುಕು ತರಲು ಮುಂದಾಗಿರುವ ಮೇಯರ್ ರಾಮಪ್ಪ ಬಡಿಗೇರ ಅವರು ವಲಯ ಕಚೇರಿಗಳ ಭೇಟಿ ಆರಂಭಿಸಿದ್ದಾರೆ.

ಮಂಗಳವಾರ ಇಲ್ಲಿಯ ನವನಗರದ ವಲಯ ಕಚೇರಿ 4ಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಕಾರ್ಯವೈಖರಿ ವೀಕ್ಷಣೆ ಮಾಡಿದರು.

ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರು, ಕರದಾತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಡೆಂಘೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನವನಗರ ಹಾಗೂ ಅಕ್ಕಪಕ್ಕದ ಬಡಾವಣೆಗಳಲ್ಲಿ ಸಂಚಾರ ಕೈಗೊಂಡು ಸ್ವಚ್ಛತೆ ಪರಿಶೀಲಿಸಿದರು.

ನವನಗರದ ಕೆ ಎಚ್ ಬಿ ಕಾಲನಿ, ಅಮರಗೋಳ, ಅಮರನಗರ, ಕೆಸಿಸಿ ಬ್ಯಾಂಕ್ ಕಾಲನಿ, ಪಂಚಾಕ್ಷರಿ ನಗರ ಹಾಗೂ ವಿವಿಧ ಕಡೆಗಳಲ್ಲಿ ಸಂಚರಿಸಿದರು.

ಕೆಲವೆಡೆ ಖಾಲಿ ಸೈಟ್ ಗಳು ಕಸದಿಂದ ತುಂಬಿರುವುದನ್ನು ಗಮನಿಸಿದ ಮೇಯರ್ ಬಡಿಗೇರ ಅವರು, ಸಾರ್ವಜನಿಕರು ತಮ್ಮ ನಿವೇಶನಗಳನ್ನು ಖಾಲಿ ಬಿಡಬಾರದು. ಒಂದು ವೇಳೆ ಮನೆ ಕಟ್ಟಲು ಆಗದಿದ್ದರೆ ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸುತ್ತಲೂ ಬೇಲಿ ಹಾಕಿ ಯಾರೂ ಕಸ ಚೆಲ್ಲದಂತೆ ನಿಗಾ ವಹಿಸಬೇಕು ಎಂದು ಹೇಳಿದರು.

ನಗರದ ರಸ್ತೆ ಹಾಗೂ ಇತರೆಡೆ ಸ್ವಚ್ಛತೆ ಬಗ್ಗೆ ಅಧಿಕಾರಿಗಳೊಂದಿಗೆ ಚಚಿರ್ಸಿದರು. ಅಭಿವೃದ್ಧಿ ಕೆಲಸಗಳ ಕುರಿತು ಸಮಾಲೋಚನೆ ನಡೆಸಿದರು. ಮಳೆಯಲ್ಲಿಯೇ ನಗರ ಸಂಚಾರ ಕೈಗೊಂಡು ಜನರ ಸಮಸ್ಯೆ ಆಲಿಸಿದರು.

ಉಪಮೇಯರ್ ದುರಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ಸುನಿತಾ ಮಾಳವದಕರ, ಮಲ್ಲಿಕಾರ್ಜುನ ಗುಂಡೂರ, ಮಂಜುನಾಥ ಬುರ್ಲಿ, ಅಧಿಕಾರಿಗಳು, ಸಾರ್ವಜನಿಕರು ಇದ್ದರು.

ಅಧಿಕಾರಿಗಳು ತರಾಟೆಗೆ:
ವಲಯ ಕಚೇರಿಯಲ್ಲಿ ಪರಿಶೀಲನೆ ವೇಳೆ ಸಾರ್ವಜನಿಕರ ಅರ್ಜಿಗಳು ಸಮಯಕ್ಕೆ ಸರಿಯಾಗಿ ವಿಲೇವಾರಿ ಆಗದಿರುವುದಕ್ಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಸಮರ್ಪಕ ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಲ ಜನರಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಯುಜಿಡಿ ಹಾಗೂ ರಸ್ತೆ ಕಾಮಗಾರಿಗೆ ತಕ್ಷಣ ಅನುಮತಿ ಪಡೆಯುವಂತೆ ಹಾಗೂ ಎಲ್ಲಿಯೂ ಮಳೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ಮಾಡಲು ಅಭಿಯಂತರರಿಗೆ ಸೂಚಿಸಿದರು.

ಪಾಲಿಕೆ ಅಭಿಯಂತರರಾದ ಮಂಜುಳಾ ಹಿರೇಮಠ, ಸೌಮ್ಯ ರಜಪೂತ, ಮಂಜುನಾಥ ದೊಡವಾಡ, ಆರೋಗ್ಯ ನಿರೀಕ್ಷಕ ಮಹಾಂತೇಶ ಮ್ಯಾಗೇರಿ ಇತರರು ಹಾಜರಿದ್ದರು.