ಜಿಲ್ಲೆ

ಜಲಸಿರಿ ಯೋಜನೆ 2025ರ ಡಿಸೆಂಬರ್‌ಗೆ ಪೂರ್ಣ

Mangaluru - Hariprasad Rai



ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಜಲಸಿರಿ ಯೋಜನೆಯ ಕಾಮಗಾರಿಗಳ
ಪ್ರಗತಿ ಪರಿಶೀಲನಾ ಸಭೆ ಮೇಯರ್ ಸುಧೀರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಜಲಸಿರಿ ಯೋಜನೆಯಡಿ 24*7 ನೀರು ಸರಬರಾಜು ವ್ಯವಸ್ಥೆಯನ್ನು 2025ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದೆಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕಾಮಗಾರಿಗಳ ವಿವರವನ್ನು ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಇಲಾಖೆಯವರು ರಸ್ತೆಗಳನ್ನು ಅಗೆದ ನಂತರ ಸಮರ್ಪಕವಾಗಿ ಮುಚ್ಚಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮೇಯರ್ ಅವರು ಕುಡ್ಸೆಂಪ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಬಂಟ್ಸ್ ಹಾಸ್ಟೆಲ್-ಪಿವಿಎಸ್ ರಸ್ತೆಯಲ್ಲಿ ಪ್ರಸ್ತುತ ಅಳವಡಿಸಲಾಗುತ್ತಿರುವ ಮುಖ್ಯ ಕೊಳವೆಯ ಕಾಮಗಾರಿಯು
ಪೂರ್ಣಗೊಂಡ ನಂತರ ಗ್ರಾವಿಟಿ ಮೂಲಕ ನೀರು ಸರಿಯಾಗಿ ತಲುಪದ ಪ್ರದೇಶಗಳಿಗೆ ಸಮರ್ಪಕ ನೀರು ಪೂರೈಕೆಗೆ
ಕ್ರಮ ಕೈಗೊಳ್ಳಲಾಗುವುದು. ಪಡೀಲ್‌ನಲ್ಲಿ ನಿರ್ಮಾಣವಾಗುತ್ತಿರುವ ನೀರು ಸಂಸ್ಕರಣಾ ಘಟಕವನ್ನು ಪಣಂಬೂರು, ಬೆಂದೂರು ಹಾಗೂ ಪಡೀಲ್ ಟ್ಯಾಂಕ್‌ಗೆ ಲಿಂಕ್ ಮಾಡಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ತಗಲುವ 60 ಕೋಟಿ ರೂ.
ಮೊತ್ತವನ್ನು ಭರಿಸಲು ಸರ್ಕಾರವನ್ನು ಕೋರಲಾಗಿದೆ ಎಂದು ಕುಡ್ಸೆಂಪ್ ಅಧಿಕಾರಿಗಳು ಸಭೆಗೆ ತಿಳಿಸಿದರು.
ಉಪ ಮೇಯರ್ ಸುನೀತ , ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮತ್ತು ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.