ಹಾಸನ: ನಗರದ ಮಹಾರಾಜ ಪಾರ್ಕ್ ಬಳಿ ಇರುವ ಫುಡ್‌ಕೋರ್ಟ್‌ಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಹೇಮಾಲತಾ ಕಮಲ್ ಕುಮಾರ್ ಹಾಗೂ ಪರಿಸರ ಪ್ರಭಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕವಿತಾ ಸಿಬ್ಬಂದಿಯೊಂದಿಗೆ ಬುಧವಾರ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು.
ಈ ವೇಳೆ ಸ್ವಚ್ಛತೆ ಕಾಪಾಡದೆ ಕಳಪೆ ಆಹಾರ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಮೇಯರ್, ಮುಂದಿನ ದಿನಗಳಲ್ಲಿ ಈ ರೀತಿಯ ಲೋಪ ಕಂಡುಬಂದರೆ ವ್ಯಾಪಾರದ ಅನುಮತಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಮಾತನಾಡಿದ ಮೇಯರ್, ಇತ್ತೀಚೆಗಷ್ಟೇ ಎಂ.ಜಿ. ರಸ್ತೆಯ ಫುಡ್ ಕೋರ್ಟ್‌ನಲ್ಲಿ ಪರಿಶೀಲನೆ ಮಾಡಿದಾಗ ಸ್ವಚ್ಛತೆ ಇರಲಿಲ್ಲ. ಆದರೆ ಇಲ್ಲಿ ಸ್ವಲ್ಪ ಮಟ್ಟಿಗೆ ಸ್ವಚ್ಛತೆ ಕಾಪಾಡಿರುವುದು ಕಂಡುಬಂದಿದೆ. ಕೆಲವರು ಪದಾರ್ಥಗಳನ್ನು ಮನೆಯಲ್ಲೇ ತಯಾರಿಸುತ್ತೇವೆ ಎಂದು ಹೇಳಿರುವುದರಿಂದ ಅವರ ಮನೆ ವಿಳಾಸ ಪಡೆದುಕೊಂಡಿದ್ದೇವೆ. ಮುಂದಿನ ಬಾರಿ ಅವರ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ದೋಸೆ ಹಿಟ್ಟನ್ನು ಕೈಲಿ ಮಾಡದೆ, ಸ್ವಚ್ಛತೆಯೊಂದಿಗೆ ತಯಾರಿಸಲು ವ್ಯಾಪಾರಿಗಳು ಒಪ್ಪಿಕೊಂಡಿದ್ದಾರೆ. ಕಬಾಬ್ ಗಾಡಿಗಳಲ್ಲಿ ಮಸಾಲೆ ಕಲಸಿದ ಕಬಾಬ್‌ಅನ್ನು ಪ್ಲೇಟ್ ಮುಚ್ಚದೆ ಇಡಲಾಗಿತ್ತು. ಫಾಮಾಯಿಲ್ ಬಳಸಿ ಬೇಯಿಸದೆ, ರಿಫೈನ್ಡ್ ಎಣ್ಣೆ ಬಳಕೆ ಮಾಡುವಂತೆ ಸೂಚಿಸಲಾಗಿದೆ.
ಪ್ಲಾಸ್ಟಿಕ್ ಉಪಯೋಗಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಾರಿ ದಂಡ ವಿಧಿಸದೆ ಎಚ್ಚರಿಕೆ ನೀಡಿದ್ದೇವೆ. ಮುಂದಿನ ಹಂತದಲ್ಲಿ ದೊಡ್ಡ ಹೋಟೆಲ್‌ಗಳಿಗೂ ಪರಿಶೀಲನೆ ವಿಸ್ತರಿಸಲಾಗುವುದು ಎಂದು ಎಚ್ಚರಿಸಿದರು.
ಪರಿಸರ ಪ್ರಭಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕವಿತಾ ಮಾತನಾಡಿ, ಮೊದಲ ಸಲ ವಾರ್ನಿಂಗ್ ನೀಡುತ್ತಿದ್ದೇವೆ. ಮುಂದಿನ ಬಾರಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದರೆ ನೇರವಾಗಿ ದಂಡ ವಿಧಿಸಲಾಗುವುದು. ಎಂ.ಜಿ. ರಸ್ತೆಯ ಫುಡ್ ಕೋರ್ಟ್‌ನಲ್ಲಿ ಎಚ್ಚರಿಕೆ ನೀಡಿದ ನಂತರ ಅಲ್ಲಿನ ವ್ಯಾಪಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿರುವುದು ಕಂಡುಬಂದಿದೆ ಎಂದರು.
ಆದರೆ ಇನ್ನೂ ಬ್ಯಾನ್ ಮಾಡಿರುವ ಪ್ಲಾಸ್ಟಿಕ್ ಬಾಟಲಿ, ನ್ಯೂಸ್ ಪೇಪರ್ ಬಳಸಿ ಪ್ಯಾಕ್ ಮಾಡುವ ಪದ್ಧತಿ ಮುಂದುವರಿದಿದೆ. ಗ್ರಾಹಕರನ್ನು ದೇವರಂತೆ ನೋಡಬೇಕು. ಜನರು ಸಹ ತಿನ್ನುವ ಸ್ಥಳದಲ್ಲಿ ಸ್ವಚ್ಛತೆ ಇದೆ ಎಂದು ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಡಕೆ ಎಲೆ ಮತ್ತು ಬಾಳೆ ಎಲೆಯಲ್ಲಿ ಸಿದ್ಧಪಡಿಸಿದ ವಸ್ತುಗಳನ್ನು ಉಪಯೋಗಿಸಬೇಕು. ಹಾಸನದಲ್ಲಿ ಕಳಪೆ ಆಹಾರ ಸೇವನೆಯಿಂದಾಗಿ ಅನೇಕರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಉದಾಹರಣೆ ನಮ್ಮ ಕಣ್ಣ ಮುಂದೆ ಇವೆ. ಆದ್ದರಿಂದ ಸೋಮಾರಿತನ ಮಾಡದೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದು ಉತ್ತುಮ ಎಂದು ಕಿವಿಮಾತು ಹೇಳಿದರು.