ತುಮಕೂರು : ಬಜೆಟ್ ಪೂರ್ವಭಾವಿ ಸಭೆ ವೇಳೆ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ ಅಸಭ್ಯ ಸಂಜ್ಞೆ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ಮೇಯರ್ ವರ್ತನೆ ಅಸಹ್ಯ ತರಿಸಿರುವುದಾಗಿ ಉಪಮೇಯರ್ ನಾಜಿಮಾಬಿ ಸೇರಿ ಮೂವರು ಕಾಂಗ್ರೆಸ್ ಸದಸ್ಯೆಯರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಮಹಾಪೌರರ ಸ್ಥಾನಕ್ಕೆ ಕಳಂಕ ತಂದಿರುವ ಬಿ.ಜಿ. ಕೃಷ್ಣಪ್ಪ ಕರೆಯುವ ಯಾವುದೇ ಸಭೆಯಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮೇಯರ್ ಕೃಷ್ಣಪ್ಪ ಅಸಭ್ಯವಾಗಿ ವರ್ತಿಸಿದರು. ಉಪಮೇಯರ್ ನಾಜಿಮಾಬಿ, ಆಯುಕ್ತೆ ರೇಣುಕಾ ಹಾಗೂ ಸ್ಥಾಯಿಸಮಿತಿ ಅಧ್ಯಕ್ಷೆ ನಳಿನಾ ವೇದಿಕೆ ಅಕ್ಕಪಕ್ಕದಲ್ಲಿ ಕುಳಿತಿದ್ದಾಗ 16ನೇ ವಾರ್ಡ್ ಸದಸ್ಯ ಇನಾಯತ್ ಅವರು ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ, ದಾರಿತಪ್ಪಿಸುತ್ತಿದ್ದಾರೆ. ಅಂಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದಾಗ ಏಕಾಏಕಿ ಸಿಟ್ಟಿಗೆದ್ದ ಕೃಷ್ಣಪ್ಪ ಅಸಭ್ಯವಾಗಿ ಕೈ ಸಂಜ್ಞೆ ಮಾಡಿದರು ಎನ್ನಲಾಗಿದೆ.
ಪಾಲಿಕೆ ವಿರೋಧ ಪಕ್ಷದ ನಾಯಕ ಜೆ. ಕುಮಾರ್ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಗೆ ಮೊದಲೇ ನಮಗೆ ಯಾವುದೇ ಅಜೆಂಡಾ, ದಾಖಲಾತಿ ನೀಡಿರಲಿಲ್ಲ. ಹಾಗಾಗಿ, ಸಭೆ ಮುಂದೂಡುವಂತೆ ಒತ್ತಾಯಿಸುತ್ತಿದ್ದೆವು. ಈ ಸಂದರ್ಭದಲ್ಲಿ ಇನಾಯತ್ ಅವರು ಲೆಕ್ಕಪತ್ರದ ಬಗ್ಗೆ ಪ್ರಸ್ತಾಪ ಮಾಡಿದರು. ಅಧಿಕಾರಿಗಳನ್ನು ಪ್ರಶ್ನಿಸಿ ಎಂದಿದ್ದಕ್ಕೆ ಅಸಮಾಧಾನಗೊಂಡ ಮೇಯರ್ ಇಂಥ ಅನಾಗರಿಕ ವರ್ತನೆ ತೋರಿದರು ಎಂದು ಆರೋಪಿಸಿದರು. ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್ ಅಹ್ಮದ್, ಸದಸ್ಯರಾದ ಟಿ.ಎಚ್. ಮಹೇಶ್‌ಕುಮಾರ್, ಧರಣೇಂದ್ರಕುಮಾರ್, ಎಂ.ಕೆ. ಮನು, ಲಕ್ಷ್ಮೀನರಸಿಂಹರಾಜು, ಬಿ.ಎಸ್. ರೂಪಶ್ರೀ, ಎಂ.ಪ್ರಭಾವತಿ ಮತ್ತಿತರರು ಇದ್ದರು.
ಮಹಿಳಾ ಸದಸ್ಯರ ಸಮ್ಮುಖದಲ್ಲಿ ಎಲ್ಲ ಸದಸ್ಯರಿಗೆ ಅಗೌರವ ತರುವಂತೆ ಮೇಯರ್ ನಡೆದುಕೊಂಡಿದ್ದಾರೆ. ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯುತ್ತದೆ. ಕೃಷ್ಣಪ್ಪ ಕರೆಯುವ ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲ. ನಾಜಿಮಾಬಿ, ಉಪಮೇಯರ್ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಣಕಾಸಿನ ಲೆಕ್ಕಾಚಾರ ಪ್ರಸ್ತಾಪ ಸಂದರ್ಭದಲ್ಲಿ ಇನಾಯತ್ ಎದ್ದು ನಿಂತು ಜೋರಾಗಿ ಕೇಳುತ್ತಿದ್ದರು. ಈ ವೇಳೆ ಕುಳಿತುಕೊಳ್ಳಿ, ಸಮಾಧಾನದಿಂದ ಹೇಳಿ ಅಂದಷ್ಟೇ ಸೂಚಿಸಿದೆ. ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದೆ. ಅಸಭ್ಯ ಸಂಜ್ಞೆ ಮಾಡಿಲ್ಲ. ನಾನು ಕ್ಷಮೆ ಕೇಳುವ ಅಗತ್ಯ ಇಲ್ಲ, ಕೇಳುವುದೂ ಇಲ್ಲ. ಬಿ.ಜಿ.ಕೃಷ್ಣಪ್ಪ, ಮೇಯರ್