ಮಾಯಕೊಂಡ: ಜಗತ್ತಿನ ರಾಜಕೀಯ ಪಕ್ಷಗಳಿಗಿಂತ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಹೇಳಿದರು.
ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಶುಕ್ರವಾರ ಬಿಜೆಪಿ ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನ ಉದ್ಘಾಟಿಸಿ, ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಇವರ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ದೇಶದಲ್ಲಿ ಪ್ರಸ್ತುತ 15 ಕೋಟಿಗಿಂತ ಹೆಚ್ಚು ಜನರು ಪಕ್ಷದ ಸದಸ್ಯತ್ವ ಹೊಂದಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ತ್ಯಾವಣಗಿ ಕೃಷ್ಣಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಒಬಿಸಿ ಜನಸಂಖ್ಯೆ ಹೊಂದಿರುವ ಗ್ರಾಮ ಮಾಯಕೊಂಡ. ಪ್ರತಿಯೊಬ್ಬರೂ ನೂರು ಸದಸ್ಯರನ್ನು ಮಾಡಬೇಕು ಎಂಬ ವರಿಷ್ಠರ ಆದೇಶದಂತೆ ಪ್ರತಿ ಕಾರ್ಯಕರ್ತ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.
ಅಭಿಯಾನದ ಜಿಲ್ಲಾ ಸಂಚಾಲಕ ಕರಿಲಕ್ಕೇನಹಳ್ಳಿ ಓಂಕಾರಪ್ಪ ಮಾತನಾಡಿ, ಬಿಜೆಪಿ ಪ್ರತಿ ಕಾರ್ಯಕರ್ತ, ಮುಖಂಡರು ನಿಮ್ಮ ಭಾಗದ ಯುವ ಮತದಾರರು, ಮಹಿಳೆಯರು ಮತ್ತಿತರ ಅಭಿಮಾನಿಗಳಿಂದ ಮಿಸ್ಡ್ ಕಾಲ್ ಕೊಡಿಸಿ, ಸದಸ್ಯತ್ವ ಮಾಡಿಸಲು ಶ್ರಮಿಸಬೇಕು ಎಂದರು.
ಮಾಯಕೊಂಡ ಕ್ಷೇತ್ರ ಬಿಜೆಪಿ ಮಂಡಲ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಳು ಮಹೇಂದ್ರ, ಜಿಲ್ಲಾ ಒಬಿಸಿ ಮೋರ್ಚಾದ ಅಧ್ಯಕ್ಷ ದೊಡ್ಡಘಟ್ಟ ಮಲ್ಲಿಕಾರ್ಜುನ್ ಮಾತನಾಡಿದರು.
ಮಾಯಕೊಂಡ ಕ್ಷೇತ್ರದ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎನ್. ಮಂಜುನಾಥ್, ರಾಜಶೇಖರ್ ಸಂಡೂರ, ಪೂಜಾರ ಅಶೋಕ್, ಒಬಿಸಿ ಮುಖಂಡರಾದ ದಿಂಡದಹಳ್ಳಿ ಕ್ಯಾತಪ್ಪ, ದ್ವಾರಕೇಶ್, ಕಲ್ಲೇಶ್, ಬಾಲಾಜಿ ಇತರರಿದ್ದರು.