ಜಿಲ್ಲೆ

ಮೈಸೂರು ಸಂಸ್ಥಾನದ ಆಳ್ವಿಕೆ ಕಂಡ ಮಾಯಗಾನಹಳ್ಳಿ

* ಗುರುಲಿಂಗಯ್ಯ ಸರ್ಕಲ್ ಹೆಸರುವಾಸಿ 

*ಸ್ವಾತಂತ್ರ್ಯ ಪೂರ್ವದಲ್ಲೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮೈಸೂರು ಸಂಸ್ಥಾನದ ಆಳ್ವಿಕೆ ಕಂಡ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲೇ ವಿದ್ಯುತ್ ಸಂಪರ್ಕ ಹೊಂದಿದ ಜಿಲ್ಲೆಯ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿರುವ ರಾಮನಗರ ತಾಲೂಕಿನ ಕಸಬಾ ಹೋಬಳಿಯ ಮಾಯಗಾನಹಳ್ಳಿ ಹಲವು ವೈಶಿಷ್ಟ್ಯದಿಂದಲೇ ಪ್ರಖ್ಯಾತಿ ಪಡೆದಿದೆ.

ಮಾಯಗಾನಹಳ್ಳಿ ಸ್ವಾತಂತ್ರ್ಯ ಪೂರ್ವದ ಮೈಸೂರು ಮಹಾರಾಜರ ಕಾಲದಲ್ಲೇ ಅಭಿವೃದ್ಧಿ ಹೊಂದಿದ ಗ್ರಾಮ. ಜಮೀನ್ದಾರರಾಗಿದ್ದ ಗುರುಲಿಂಗಯ್ಯ ಎಂಬುವವರು ಮಹಾರಾಜರ ಆಳ್ವಿಕೆಯಲ್ಲಿ ಮೈಸೂರು ರಾಯಲ್ ಅಸೆಂಬ್ಲಿ ಸದಸ್ಯರಾಗಿದ್ದುದು ಈಗ ಇತಿಹಾಸ.

ಪ್ರಸ್ತುತ ಮಾಯಗಾನಹಳ್ಳಿಯು ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದು, ಕೃಷಿಕರೇ ಹೆಚ್ಚಿರುವ ಜತೆಗೆ ಸರ್ವ ಧರ್ಮದ ಸಹಬಾಳ್ವೆಗೆ ಸಾಕ್ಷಿಯಾಗಿದೆ. ಜಿಲ್ಲಾ ಕೇಂದ್ರದಿಂದ 8 ಕಿಮೀ ಅಂತರದಲ್ಲಿರುವ ಈ ಕಂದಾಯ ಗ್ರಾಮದಲ್ಲಿ ಸುಮಾರು 2500 ಜನ ವಾಸವಿದ್ದಾರೆೆ. ಹಿಂದು ಮತ್ತು ಮುಸ್ಲಿಂ ಸಮುದಾಯಗಳು ಸೌಹಾರ್ದವಾಗಿ ಜೀವನ ನಡೆಸುತ್ತಾ ಬಂದಿದ್ದಾರೆ. ಗರಿ ಶೆಡ್, ನಾಡ ಹೆಂಚಿನ ಮನೆಗಳು, ಮಣ್ಣಿನ ರಸ್ತೆಗಳಿದ್ದ ಗ್ರಾಮ ಕಾಂಕ್ರೀಟ್ ಮನೆಗಳು, ಡಾಂಬರು ರಸ್ತೆಗಳು ನಿರ್ಮಾಣಗೊಂಡು ಅಭಿವೃದ್ಧಿಯತ್ತ ಸಾಗಿದೆ.

ಗ್ರಾಮದಲ್ಲಿವೆ ಹಲವು ದೇಗುಲ

ಬಸವೇಶ್ವರ, ಮಹದೇಶ್ವರ, ಮಾರಮ್ಮ, ವೀರಾಂಜನೇಯ, ಹುಚ್ಚಮಾದಪ್ಪ, ಆದಿಶಕ್ತಿ, ಮುತ್ತರಾಯಸ್ವಾಮಿ ದೇವಾಲಯಗಳಿವೆ.

ಹೋಬಳಿಯಲ್ಲೇ ಮೊದಲ ಡೇರಿ

ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಗ್ರಾಮ ಪಂಚಾಯಿತಿ ಕಚೇರಿ, ಪೆಟ್ರೋಲ್ ಬಂಕ್, ಕೆನರಾ ಬ್ಯಾಂಕ್, ಅಂಚೆ ಕಚೇರಿ, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಕಾರ್ಖಾನೆಗಳು, ಖಾಸಗಿ ಶಾಲೆ, ಐಟಿಐ ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ ಗ್ರಾಮದಲ್ಲಿದೆ. 1963ರಲ್ಲಿ ಗ್ರಾಮದಲ್ಲಿ ಪ್ರಥಮವಾಗಿ ಹಾಲಿನ ಡೇರಿ ಕಸಬಾ ಹೋಬಳಿಯಲ್ಲೇ ಮೊದಲನೆಯದಾಗಿ ಪ್ರಾರಂಭವಾಗಿ ಇಂದು ಹೈನುಗಾರಿಕೆಯಲ್ಲೂ ತನ್ನದೇ ಆದ ಛಾಪು ಮೂಡಿಸಿದೆ. ಅಲ್ಲದೇ, ಸ್ವಾತಂತ್ರ್ಯ ಪೂರ್ವದಲ್ಲೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರೆತು ಪ್ರಾಥಮಿಕ ಶಾಲೆ ಅದೇ ಸಂದರ್ಭದಲ್ಲಿ ಸ್ಥಾಪನೆಯಾಗಿದೆ ಎಂದು ಹೇಳಲಾಗಿದೆ.

ನೀರಿನ ಬವಣೆ ನೀಗಿಸುವ ಕೆರೆಗಳು

ಗ್ರಾಮದಲ್ಲಿ ತೆಂಗು, ಮಾವು, ರೇಷ್ಮೆ, ಬೆಳೆಗಾರರಿದ್ದು, ಜತೆಗೆ ಬಹಳ ವರ್ಷಗಳಿಂದಲೂ ಹೈನುಗಾರಿಕೆಯಲ್ಲಿ ಜೀವನ ಕಟ್ಟಿಕೊಂಡಿರುವ ಕುಟುಂಬಗಳಿಗೆ ಗ್ರಾಮದ ಸಮೀಪದ ಕನ್ನಬಸವನಕಟ್ಟೆ, ಗೌಡನಕಟ್ಟೆ, ಹತ್ತಿಕಟ್ಟೆ, ಚುಂಚೋಬಿ ಕಟ್ಟೆ, ಕೇತೋಹಳ್ಳಿ ಕೆರೆಗಳು ನೀರಿನ ಕೊರತೆ ನೀಗಿಸಿ ಅಂತರ್ಜಲ ಪೂರಕವಾಗಿ ರೈತರ ಬೆನ್ನೆಲುಬಿಗೆ ನಿಂತಿವೆ.

ಒಡೆಯರ್‌ಗೆ ಹತ್ತಿರವಾಗಿದ್ದ ಗುರುಲಿಂಗಯ್ಯ

ಬೆಂಗಳೂರಿನಿಂದ ಸುಗ್ಗನಹಳ್ಳಿ ಮಾರ್ಗವಾಗಿ ರಾಮನಗರಕ್ಕೆ ಹಳೇ ಮಾದರಿಯ ಬಸ್ ಪ್ರಥಮವಾಗಿ ಓಡುತ್ತಿತ್ತು. ಪ್ರತಿದಿನ ಒಂದೇ ಬಸ್ ಸಂಚರಿಸುತ್ತಿತ್ತು. ಆ ಬಸ್ ಗುರುಲಿಂಗಯ್ಯ ಅವರ ಮನೆ ಮುಂದೆ ಬಂದು ನಿಂತು ಅವರು ಬರುವವರೆಗೂ ಕಾದು ಬಸ್ ಹತ್ತಿದ ನಂತರ ಬೆಂಗಳೂರಿಗೆ ಬಸ್ ಚಾಲನೆ ಆಗುತ್ತಿತಂತೆ ಅಷ್ಟೋಂದು ಮಾನ್ಯತೆ ಗುರುಲಿಂಗಯ್ಯ ಅವರಿಗೆ ಆ ಕಾಲದಲ್ಲಿ ಇತ್ತಂತೆ!

ಗ್ರಾಮದ ಗುರುಲಿಂಗಯ್ಯ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ದಿವಾನ ಸರ್ ಮಿರ್ಜಾ ಇಸ್ಮಾಹಿಲ್ ಸೇರಿ ಇತರರಿಗೆ ಬಹಳ ಹತ್ತಿರವಾಗಿದ್ದರು. ಕೇತೋಹಳ್ಳಿ ಕೆರೆ ಕಟ್ಟುತ್ತಿದ್ದ ಸಂದರ್ಭದಲ್ಲಿ ಬೆಂಗಳೂರು-ಮೈಸೂರಿಗೆ ಹೋಗುವ ಸಂದರ್ಭಗಳಲ್ಲಿ ಮಹಾರಾಜರು, ದಿವಾನರು ಇವರನ್ನು ಭೇಟಿಯಾಗಿ ಹೋಗುತ್ತಿದ್ದರಂತೆ. ಅಷ್ಟೊಂದು ಆತ್ಮೀಯತೆ ಅವರಿಗಿತ್ತು ಎನ್ನುತ್ತಾರೆ ಗ್ರಾಮದ ಹಿರಿಯರು.

ಗ್ರಾಮದಲ್ಲಿ ಈಗಲೂ ಗುರುಲಿಂಗಯ್ಯ ಹೆಸರಿನಲ್ಲಿ ಸರ್ಕಲ್ ಇದ್ದು, ಅದು ಹಿಂದಿನ ದಿನಗಳಲ್ಲಿ ಬಹು ಹೆಸರು ಪಡೆದ ಸರ್ಕಲ್ ಆಗಿತ್ತು. ಸುತ್ತಮುತ್ತಲ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ಜನರು ಇದೆ ಸರ್ಕಲ್‌ಗೆ ಬಂದು ಬಸ್ ಹತ್ತಿ ಪ್ರಯಾಣಿಸಬೇಕಿತ್ತು. ಆದ್ದರಿಂದ ಸರ್ಕಲ್ ಬಹು ಪ್ರಾಮುಖ್ಯತೆ ಹೊಂದಿತ್ತು.

ಗ್ರಾಮದ ಇತಿಹಾಸ

ಗ್ರಾಮವನ್ನು ಹಿಂದೆ ಮಾಯಗೊಂಡನಹಳ್ಳಿ ಎಂದು ಕರೆಯುತ್ತಿದ್ದರಂತೆ ಈಗಲೂ ಹಳೇ ಕಂದಾಯ ದಾಖಲಾತಿಗಳಲ್ಲಿ ಮಾಯಗೊಂಡನಹಳ್ಳಿ ಎಂದು ಇದೆ ಎನ್ನಲಾಗುತ್ತದೆ. ಕಾಲಾಂತರದಲ್ಲಿ ಮಾಯಗಾನಹಳ್ಳಿಯಾಗಿ ಈಗ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿದೆ. ಅಂತೆಯೇ ಬೆಂಗಳೂರು- ಮೈಸೂರು ರಸ್ತೆ ಆದ ನಂತರ ಗುರುಲಿಂಗಯ್ಯ ಅವರು ಮೈಸೂರು ಸಂಸ್ಥಾನದ ಸದಸ್ಯರಾಗಿದ್ದ ಕಾರಣ ಈ ಗ್ರಾಮದ ಹೆಸರು ಮೈಸೂರು ಸಂಸ್ಥಾನದಲ್ಲಿ ಚಿರಪರಿಚಿತವಾಗಿತ್ತು.