ಹಗರಿಬೊಮ್ಮನಹಳ್ಳಿಯಲ್ಲಿ ವೀರಶೈವ ಪಂಚಮಸಾಲಿ ಸಮುದಾಯದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು. ಸಮುದಾಯದ ಪ್ರಮುಖರಾದ ಬಾವಿಬೆಟ್ಟಪ್ಪ, ಶಂಭಣ್ಣ, ವೈ.ಮಲ್ಲಿಕಾರ್ಜುನ, ಮಂಜುಳಾ ವಿರೂಪಾಕ್ಷಗೌಡ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್‌ಇತರರಿದ್ದರು. 
ಜಿಲ್ಲೆ

ಸಾಧನೆ ಮಾಡುವ ಛಲ ನಿಮ್ಮಲ್ಲಿರಲಿ

ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಪ್ರತಿಭಾ ಪುರಸ್ಕಾರ ಸಹಕಾರಿಯಾಗಿದೆ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ಪಟ್ಟಣದ ಹರ ದೇಗುಲದ ಆವರಣದಲ್ಲಿ ವೀರಶೈವ ಪಂಚಮಸಾಲಿ ಸಮುದಾಯದಿಂದ ಹಮ್ಮಿಕೊಳ್ಳಲಾಗಿದ್ದ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭಕ್ಕೆ ಭಾನುವಾರ ಜ್ಯೋತಿ ಬೆಳಗಿಸಿ ಮಾತನಾಡಿದರು.

ಸಾಧನೆ ಎನ್ನುವುದು ಯಾರ ಸ್ವತ್ತಲ್ಲ ಸಾಧಿಸುವ ಛಲ ನಿಮ್ಮಲ್ಲಿರಬೇಕು. ವಿದ್ಯಾರ್ಥಿಗಳು ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ಸಮುದಾಯದ ಮಾಜಿ ಅಧ್ಯಕ್ಷ ಬಾವಿಬೆಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯದಿಂದ ವಿದ್ಯಾರ್ಥಿಗಳಿಗಾಗಿ ಮಾಡುವ ಸಮಾರಂಭ ಸಮುದಾಯ ಭವನದಿಂದ ಬರುವ ಆದಾಯದಲ್ಲಾಗಿದೆ. ಈ ಸಮುದಾಯ ಭವನ ನಿರ್ಮಾಣಕ್ಕಾಗಿ, ನೇಮಿರಾಜನಾಯ್ಕ ಅವರು ಮೊದಲ ಬಾರಿಗೆ ಶಾಸಕರಾದಾಗ ಸರ್ಕಾರದಿಂದ ಮಂಜೂರಾದ 3ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿದೆ. ಈ ಆವರಣದಲ್ಲಿ ಸಮುದಾಯದ ಶಾಲೆ ನಡೆಯುತಿದೆ.

ಇಲ್ಲಿ ಸಮಾರಂಭಗಳು ನಡೆಯುವುದರಿಂದ ಮಕ್ಕಳ ಕಲಿಕೆಗೆ ಕಿರಿಕಿರಿ ಉಂಟಾಗುತ್ತಿದ್ದು, ಸಮುದಾಯದ ಶಾಲೆಗೆ ಬಾಚಿಗೊಂಡನಹಳ್ಳಿ ಹತ್ತಿರದ ನಿವೇಶನದಲ್ಲಿ ಅವಕಾಶಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಮುದಾಯದ ಮಹಿಳಾ ಮಾಜಿ ಅಧ್ಯಕ್ಷೆ ನಾಗರತ್ನ ಅಶೋಕ ಬಾವಿಕಟ್ಟಿ ಮಾತನಾಡಿ, ಸಮುದಾಯದ ಮೀಸಲಾತಿಗಾಗಿ ಕೈಗೊಂಡ ಹೋರಾಟದ ದಿಕ್ಕು ಬದಲಾಗಿ ರಾಜಕೀಯ ಸ್ವಾರ್ಥದತ್ತ ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಮಾಲಯನ್ ಧ್ಯಾನ ಯೋಗ ಶಿಬಿರದ ನಿರಂಜನ ಸ್ವಾಮೀಜಿ, ಗದ್ದಿಕೆರೆ ವಿರಕ್ತಮಠದ ಇಮ್ಮಡಿ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಲೂಕು ಮಾಜಿ ಅಧ್ಯಕ್ಷರಾದ ಬಸವರಾಜ ದಿಂಡೂರು, ಜಿ.ಪಿ.ಪಾಟೀಲ್, ಮಾಜಿ ಪ್ರಧಾನ ಕಾರ್ಯದರ್ಶಿ ಹನಸಿ ಸಿದ್ದೇಶ, ಯುವ ಘಟಕದ ಅಧ್ಯಕ್ಷ ಕಿಚಿಡಿ ಕೊಟ್ರೇಶ ಮತ್ತಿತರರು ಮಾತನಾಡಿದರು.

ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ಉಪಾಧ್ಯಕ್ಷ ಜ್ಯೋತೆಪ್ಪ, ಕಾರ್ಯದರ್ಶಿ ಬಾವಿ ರವೀಂದ್ರ, ಯುವ ಘಟಕದ ತಾಲೂಕು ಅಧ್ಯಕ್ಷ ಎಸ್.ಎ.ಸಂತೋಷ, ಮಹಿಳಾ ಮಾಜಿ ಅಧ್ಯಕ್ಷೆ ಮಂಗಳಾ ಬಸವರಾಜ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ, ಉತ್ತಂಗಿ ಸಿ.ರವಿ, ಇಳಕಲ್ಲಿನ ಬೊಮ್ಮಸಾಗರ ಮಲ್ಲಣ್ಣ, ಸಂಚಿ ಶಿವಕುಮಾರ ಇತರರಿದ್ದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಲೋಕಾಯುಕ್ತ ಸಿಪಿಐ ಎಚ್.ಗುರುಬಸವರಾಜ, ದಾಳಿಂಬೆ ಬೆಳೆಗಾರ ಡಾ.ದೇವೇಂದ್ರಪ್ಪ ಬಳೂಟಗಿ, ಸಾಹಿತಿ ಎ.ಆರ್.ಪಂಪಣ್ಣ, ಸಂತೋಷ್‌ಕುಮಾರಿ, ನೌಕಾಪಡೆಯಲ್ಲಿ ಅಗ್ನಿವೀರಕ್ಕೆ ಆಯ್ಕೆಯಾದ ನಿವೇದಿತಾ ಅವರನ್ನು ಸನ್ಮಾನಿಸಲಾಯಿತು.