ಹಿರೀಸಾವೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಮಾತನಾಡಿದರು. 
ಜಿಲ್ಲೆ

ಶಿಕ್ಷಣ ಕಲಿಕೆಯೊಂದಿಗೆ ವಿವೇಕ ಮೈಗೂಡಿಸಿಕೊಳ್ಳಲಿ

ಮಾದೇಶ್ ತಿ.ನರಸೀಪುರ

ಹಿರೀಸಾವೆ: ಶಿಕ್ಷಣ ಕಲಿಯುವುದರ ಜತೆಗೆ ವಿವೇಕವನ್ನು ಮೈಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸಲಹೆ ನೀಡಿದರು.

ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್, ರೆಡ್ ರಿಬ್ಬನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿರುವ ಸರ್ಕಾರಿ ಹಿರಿಯ, ಕಿರಿಯ, ಪ್ರೌಢಶಾಲೆ ಹಾಗೂ ಕಾಲೇಜುಗಳ ಶೈಕ್ಷಣಿಕ ವ್ಯವಸ್ಥೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಿರೀಸಾವೆ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ 1 ಕೋಟಿ ರೂ.ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಾಲಿಗೆಗೆ ಹೆಚ್ಚು ರುಚಿ ನೀಡುವ ಆಹಾರ ಆರೋಗ್ಯಕ್ಕೆ ಅಷ್ಟೇ ಹಾನಿಕಾರಕವಾಗಿರುತ್ತದೆ. ಹಣ, ಆಸ್ತಿ ಸಂಪಾದನೆಗಿಂತ ಆರೋಗ್ಯ ಉಳಿಸಿಕೊಳ್ಳುವುದು ಅತಿ ಮುಖ್ಯವಾದ ಸಂಗತಿಯಾಗಿದೆ. ಪೌಷ್ಟಿಕ ಆಹಾರ ಸೇವನೆ ಜತೆಗೆ ಯೋಗ ಹಾಗೂ ಧ್ಯಾನವನ್ನು ದೈನಂದಿನ ಬದುಕಿನಲ್ಲಿ ದಿನಚರಿಯಾಗಿ ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿ, ಜ್ಞಾನವನ್ನು ಉತ್ತಮ ಕಾರ್ಯಗಳಿಗೆ ಸರಿಯಾಗಿ ಬಳಸಿಕೊಳ್ಳುವ ಮೂಲಕ ಸಮಾಜದ ಏಳಿಗೆಗೆ ಪೂರಕವಾಗಿ ಬದುಕುವುದು ಅಗತ್ಯ. ವಿಷಯ ಯಾವುದೇ ಆಗಲಿ ಅದನ್ನು ಅರಿಯುವ ಜ್ಞಾನ ಬೇಕು ಎಂದರು.

ಶೈಕ್ಷಣಿಕ ವ್ಯವಸ್ಥೆ ಅಭಿವೃದ್ಧಿಗೊಂಡರೆ ಸಾಲದು ಮಕ್ಕಳಲ್ಲಿ ಅಪಾರ ಜ್ಞಾನ ಬೆಳೆಯಬೇಕು. ಶಿಕ್ಷಣ ಹೆಚ್ಚಿದಂತೆಲ್ಲ ಪಾಲಕರು ಮಕ್ಕಳನ್ನು ಪ್ರಶ್ನಿಸಲು ಭಯಪಡುವ ಅಥವಾ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಮೌಲ್ಯಯುತ ಶಿಕ್ಷಣ ಅಗತ್ಯ ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಎಚ್.ಲಕ್ಷ್ಮಣಗೌಡ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲೋಕೇಶ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಆರ್.ಮರುಳಾರಾಧ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಮಂಜುನಾಥ್, ರೆಡ್ ರಿಬ್ಬನ್ ಸಮಿತಿ ಸಂಚಾಲಕ ಎಚ್.ಜೆ.ಹರೀಶ್, ಕ್ರೀಡಾ ಸಮಿತಿ ಸಂಚಾಲಕ ಎಸ್.ರಾಘವೇಂದ್ರ, ಪ್ರಮುಖರಾದ ವಿಶ್ವಣ್ಣ ಇತರರು ಇದ್ದರು.