ಜಿಲ್ಲೆ

ನೀರಿನ ಸಮಸ್ಯೆ ಎದುರಾಗದಿರಲಿ

ರೇಷ್ಮೆ ನಗರ ಡೆಸ್ಕ್

ಶಾಸಕ ಸಿ.ಪಿ.ಯೋಗೇಶ್ವರ್ ಸೂಚನೆ ಚನ್ನಪಟ್ಟಣದಲ್ಲಿ ಪಿಡಿಒ, ಅಧಿಕಾರಿಗಳೊಂದಿಗೆ ಸಭೆ

ಚನ್ನಪಟ್ಟಣ : ಗ್ರಾಪಂಗಳಲ್ಲಿ ಲಭ್ಯವಿರುವ 15ನೇ ಹಣಕಾಸು ಅನುದಾನವನ್ನು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮಾತ್ರ ಬಳಸಿ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಾಲೂಕಿನ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಕುಡಿಯುವ ನೀರಿನ ಸಂಬಂಧ ಹಮ್ಮಿಕೊಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೀರಾವರಿಗೆ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೇಸಿಗೆಯಲ್ಲಿ ತಾಲೂಕಿನ ಯಾವುದೇ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಉದ್ಭವಿಸದಂತೆ ಗ್ರಾಪಂ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ಗ್ರಾಪಂಗಳೇ ಘಟಕ ನಿರ್ವಹಿಸಲಿ!

ತಾಲೂಕಿನ ಪ್ರತಿ ಗ್ರಾಮಗಳಲ್ಲಿ ವಿವಿಧ ಅನುದಾನ ಬಳಸಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ, ಇವುಗಳ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆ ಕಂಡುಬರುತ್ತಿದೆ. ಇಂತಹ ಘಟಕಗಳ ನಿರ್ವಹಣೆಯನ್ನು ಆಯಾ ಗ್ರಾಪಂಗಳೇ ವಹಿಸಿಕೊಳ್ಳಬೇಕು. ಯಾವುದೇ ಸ್ಕೀಮ್ನಲ್ಲಿ ನಿರ್ಮಿಸಿದ್ದರೂ ಅವುಗಳನ್ನು ಗ್ರಾಪಂಗಳು ಸುಪರ್ದಿಗೆ ಪಡೆದುಕೊಳ್ಳಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಗ್ರಾಪಂನ ಕರ್ತವ್ಯ. ನೀರನ್ನು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರು ನೀಡಿ. ಕೆಟ್ಟ ಘಟಕವನ್ನು ರಿಪೇರಿ ಮಾಡಿಸಿ. ಕೆಲ ಖಾಸಗಿಯವರು ಘಟಕಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಬರದಂತೆ ಕ್ರಮವಹಿಸಿ ಎಂದು ತಾಕೀತು ಮಾಡಿದರು.

ವ್ಯವಸ್ಥೆ ಹಾಳು ಮಾಡಿರುವವರು ನೀವೇ!

ಪ್ರತಿ ಗ್ರಾಪಂಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಪಡೆದರು. ಈ ವೇಳೆ ಬಹುತೇಕ ಪಿಡಿಒಗಳು ಜೆಜೆಎಂ ಕಾಮಗಾರಿಯ ಅವ್ಯವಸ್ಥೆ ಬಗ್ಗೆ ಶಾಸಕರ ಗಮನಸೆಳೆದರು. ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕರು, ಕಾಮಗಾರಿ ನಿರ್ವಹಣೆಯ ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ವಿರುದ್ಧ ಗರಂ ಆದರು. ಸರ್ಕಾರ ಒಳ್ಳೆಯ ಉದ್ದೇಶದಿಂದ ಜೆಜೆಎಂ ಎಂಬ ಉತ್ತಮ ಕಾರ್ಯಕ್ರಮ ರೂಪಿಸಿತು. ಆದರೆ, ಈ ಯೋಜನೆ ಸಂಪೂರ್ಣ ಹಾಳಾಗಿದೆ. ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಲು ನೀವೇ ಕಾರಣ. ಈ ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಿ. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ಕಿಡಿಕಾರಿದರು. ಕಾಮಗಾರಿಗಳನ್ನು ಪೂರ್ಣಗೊಳಿಸಿ ಪರಿಶೀಲನೆ ನಡೆಸಿ ನಂತರ ಬಿಲ್ ಮಂಜೂರು ಮಾಡಿ ಎಂದು ಆದೇಶ ನೀಡಿದರು.

ಸರ್ಕಾರಿ ಭೂಮಿ ಕಾಪಾಡಿ

ತಾಲೂಕಿನ ಹಲವೆಡೆ ಸರ್ಕಾರಿ ಭೂಮಿಗಳನ್ನು ಖಾಸಗಿಯವರು ಆಕ್ರಮಿಸಿಕೊಂಡು ಅನುಭವಿಸುತ್ತಿದ್ದಾರೆ. ಸರ್ಕಾರದ ಭೂಮಿ ರಕ್ಷಿಸಿಕೊಳ್ಳಲು ಪಿಡಿಒಗಳು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸರ್ಕಾರದ ಸ್ವತ್ತು ಕಾಪಾಡುವುದು ನಿಮ್ಮ ಕರ್ತವ್ಯ. ನೀವೇ ಈ ರೀತಿ ಮಾಡಿದರೆ ಸರ್ಕಾರಿ ಜಾಗ ಉಳಿಸುವವರು ಯಾರು ಎಂದು ಪಿಡಿಒಗಳನ್ನು ಪ್ರಶ್ನಿಸಿದರು.

ಕುಡಿಯುವ ನೀರು ಸೇರಿ ಗ್ರಾಮೀಣಾಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ತಹಸೀಲ್ದಾರ್ ನರಸಿಂಹಮೂರ್ತಿ, ತಾಪಂ ಇಒ ಸಂದೀಪ್, ನೀರಾವರಿ ಇಲಾಖೆಯ ಶಿವಕುಮಾರ್ ಸೇರಿ ಹಲವರು ಇದ್ದರು.