ಜಿಲ್ಲೆ

ಕುಡಿಯುವ ನೀರಿನ ಅಭಾವವಾಗದಿರಲಿ

ವೀರೇಶ ಸೌದ್ರಿ

ಕಾರವಾರ: ಪ್ರಸ್ತುತ ಬೇಸಿಗೆ ಕಾಲವಾದ್ದರಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವವಾಗದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುವುದನ್ನು ಖಾತ್ರಿಪಡಿಸಿಕೊಂಡು ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಅಭಾವ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಮುನ್ನ ಪಿಡಿಒ ಮತ್ತು ತಾಪಂ ಇಒ ಸಮನ್ವಯ ಸಾಧಿಸಿ ಮಾಹಿತಿ ಪಡೆದು ವರದಿ ಸಲ್ಲಿಸಬೇಕು. ಈ ವರದಿ ಆಧಾರದ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅವಶ್ಯಕವಿರುವ ಹೊಸ ಬೋರ್‌ವೆಲ್‌ಗಳು, ಪೈಪ್ ಹಾಗೂ ರಿಚಾರ್ಜ್ ಪಿಟ್‌ಗಳ ಬಗ್ಗೆ ಮಾಹಿತಿ ಒದಗಿಸಬೇಕು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ಮಾಡಿ, ನಡವಳಿ ಸಹಿತ ಅನುಪಾಲನಾ ವರದಿಯನ್ನು ನೀಡಬೇಕು ಹಾಗೂ ಕುಡಿಯುವ ನೀರು ಪೂರೈಕೆಯ ಮೂಲದ ನೀರಿನ ಗುಣಮಟ್ಟ ಬಗ್ಗೆ ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷಿಸುವುದರ ಜತೆ ನೀರಿನ ಮಾದರಿಯನ್ನು ಜೈವಿಕ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಬೇಕು. ನೀರಿನ ಮಾದರಿ ಸಂಗ್ರಹಿಸುವ ಸಿಬ್ಬಂದಿ ಆಯ್ಕೆ ಮಾಡಿದ ಪ್ರದೇಶದ ನೀರಿನ ಮಾದರಿಯ ಜತೆ ಇತರ ಪ್ರದೇಶದ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಎಂದರು.

ಈಗಾಗಲೇ ಕೊರೆಯಲಾದ ಬೋರ್‌ವೆಲ್‌ಗಳ ನೀರಿನ ಮಟ್ಟದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯ ಸಾಧಿಸಿ ಮುಂಜಾಗ್ರತೆ ಕ್ರಮವಹಿಸಿ ಸಮರ್ಪಕ ನೀರನ್ನು ಪೂರೈಕೆ ಮಾಡುವುದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಡಿ. ರಘುನಾಥ ಮಾತನಾಡಿ, ಬೇಸಿಗೆ ಕಾಲದಲ್ಲಿ ಜನರಿಗೆ ನೀರಿನ ಮಿತ ಬಳಕೆಯ ಕುರಿತಂತೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ವಿವಿಧ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಪ್ರಕಾಶ ಹಾಲಮ್ಮನವರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಶಂಕರರಾವ್, ಸಮಾಜ ಕಲ್ಯಾಣ ಇಲಾಖೆಉಪ ನಿರ್ದೇಶಕ ಉಮೇಶ ಇತರರಿದ್ದರು.

ಜಿಲ್ಲೆಯ ಕೆಲವು ಅಂಗನವಾಡಿ, ಶಾಲೆ ಹಾಗೂ ವಸತಿ ಶಾಲೆಗಳಿಗೆ ಸರ್ಮಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆಯಾಗದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಕುರಿತಂತೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕು ಹಾಗೂ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಈಶ್ವರ ಕಾಂದೂ