ಜಿಲ್ಲೆ

ಧರ್ಮ ಮಾರ್ಗದಲ್ಲಿ ಲೋಕ ಸಾಗುವಂತಾಗಲಿ

ಶಿರಸಿ: ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡಿರುವ ಮೂರನೇ ವರ್ಷದ ಒಂಬತ್ತು ದಿನಗಳ ಕೃಷ್ಣಯಜುರ್ವೆದಘನ ಪಾರಾಯಣ ಸತ್ರ - 3 ಗುರುವಾರದಿಂದ ಆರಂಭಗೊಂಡಿದೆ.

ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಮಹಾಸಂಕಲ್ಪವನ್ನು ಕೈಗೊಳ್ಳಲಾಯಿತು. ಶ್ರೀ ಮಠದ ಶಿಷ್ಯ ಭಕ್ತ ಜನರಿಗೆ ಸಕಲ ಕ್ಷೇಮವು, ಸಕಾಲದಲ್ಲಿ ಮಳೆ ಆಗಲಿ, ಧನ-ಧಾನ್ಯಗಳು ಸಮೃದ್ಧಿಯಾಗಲಿ, ವಿವಿಧ ವಿಕೃತಿಗಳು ನಿವಾರಣೆಯಾಗಿ ಸಂಸ್ಕೃತಿಯ ಪುನರುತ್ಥಾನವಾಗಲಿ, ಲೋಕವು ಧರ್ಮ ಮಾರ್ಗದಲ್ಲಿ ಸಾಗುವಂತಾಗಲಿ ಎಂದು ಸಂಕಲ್ಪ ಮಾಡಲಾಯಿತು.

ವೇದವಿದ್ವಾಂಸರಾದ ಕೊಯಂಬತ್ತೂರಿನ ಘನಪಾಠಿ ವೇ.ಬ್ರ. ಆಹಿತಾಗ್ನಿ ಜಂಬೂನಾಥ, ಯಲ್ಲಾಪುರದ ವೇ.ಮೂ. ಗೋಪಾಲಕೃಷ್ಣ ಘನಪಾಠಿ, ತಮಿಳುನಾಡಿನ ವೇ.ಮೂ. ಭುವನಸುಂದರ ಘನಪಾಠಿ, ರಾಧಾಕೃಷ್ಣ ನಪಾಠಿ, ಮತ್ತೀಫಟ್ಟಾ, ಗೋಕರ್ಣದ ವೇ.ಮೂ. ನಾಗರಾಜ ಗಾಯತ್ರೀ ಘನಪಾಠಿ, ಶಿವಮೊಗ್ಗದ ವೇ. ಮೂ. ದತ್ತಾತ್ರೇಯ ಘನಪಾಠಿ, ಶೃಂಗೇರಿಯ ವೇ. ಮೂ. ರಾಮಚಂದ್ರ ಘನಪಾಠಿ, ವೇ.ಮೂ. ನಿರಂಜನ ಘನಪಾಠಿ ಬೆಣ್ಣೆಗದ್ದೆ, ಶಶಿಭೂಷ ಶರ್ವ, ಶ್ರೀವತ್ಸ, ಶ್ರೀನಿವಾಸ ಇತರ ವಿದ್ವಾಂಸರು ಭಾಗವಹಿಸಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.