ಜಿಲ್ಲೆ

ಸಂವಿಧಾನದ ಆಶಯ ಈಡೇರಲಿ

ವಿಜಯಪುರ: ಯುವ ಜನರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ದೇಶಕ್ಕಾಗಿ ನಾವು ಏನಾದರೂ ಕೊಡುಗೆ ನೀಡಬೇಕೆಂದರೆ ಮಕ್ಕಳಲ್ಲಿ ದೇಶಪ್ರೇಮ, ಮಹನೀಯರ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಾಷ್ಟ್ರೀಯ ಸೌಹಾರ್ದ ವೇದಿಕೆ ಹಾಗೂ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸಂವಿಧಾನದ ಆಶಯ ಈಡೇರಿದೆಯೇ?’ ಎಂಬ ವಿಷಯದ ಕುರಿತಾದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರಮುಕ್ತ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಿದೆ. ಜಾತಿಯತೆ, ಅಪರಾಧ, ಅನೈತಿಕತೆ, ಅರಾಜಕತೆಯನ್ನು ತೊಡೆದು ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಯಾಗಬೇಕಿದೆ. ಶಿಕ್ಷಣ ಕ್ಷೇತ್ರ ಶ್ರೀಮಂತರ ಪಾಲಾಗುತ್ತಿದೆ. ಬಡವರ ಮಕ್ಕಳು ಶಿಕ್ಷಣ ಕಲಿಯುವುದು ದುಸ್ಸಾಹಸದ ಕೆಲಸವಾಗುತ್ತಿದೆ. ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ಬಡವರ ಮಕ್ಕಳ ಕಲಿಕೆ ಕುಂಠಿತಗೊಳ್ಳುತ್ತಿದ್ದು, ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕಿದೆ ಎಂದರು.

ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ಅವರು, ಒಂದು ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕೋ? ಅಥವಾ ಜಾತಿ, ಧರ್ಮ ಹಾಗೂ ಪಕ್ಷದ ಪ್ರಣಾಳಿಕೆಯನ್ನು ನೋಡಿ ಮತ ನೀಡಬೇಕೋ ? ಎನ್ನುವ ಗೊಂದಲ ಮತದಾರರಲ್ಲಿ ಕಾಡುತ್ತಿದೆ. ಜನ ಬಲ, ಜಾತಿ, ತೋಳ್ಬಲ ಇಂದಿನ ರಾಜಕೀಯ ವ್ಯವಸ್ಥೆಯ ಪ್ರಮುಖ ಅಸ್ತ್ರವಾಗಿದೆ. ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರಿಗೆ ಇದೆ. ಹಾಗಾಗಿ ಪ್ರಾಮಾಣಿಕರಿಗೆ ಮತ ಹಾಕಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಾಮುಖ್ಯತೆ ದೊರೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ಮಾತನಾಡಿ, ಸಂವಿಧಾನದ ಆಶಯದಂತೆ ದೇಶದಲ್ಲಿ ಎಲ್ಲರಲ್ಲೂ ಸಮಾನತೆ, ಸಹೋದರತೆ, ಬ್ರಾತೃತ್ವ ಮನೋಭಾವನೆ ಬೆಳೆಯಬೇಕು. ಆದರೆ ನಿಜ ಜೀವನದಲ್ಲಿ ಸಮಾನತೆ ಕಾಣಲು ಸಾಧ್ಯವಾಗುತ್ತಿಲ್ಲ. ಎಲ್ಲ ಧರ್ಮಗಳು ಒಂದೇ ಎಲ್ಲರನ್ನೂ ಸಾಮಾನವಾಗಿ ಕಾಣಬೇಕು. ಆಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಕಂಡಂತಹ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾಹಿತಿ ವಿದ್ಯಾವತಿ ಅಂಕಲಗಿ, ಜೆ.ಎಸ್.ಪಾಟೀಲ, ಚಂದ್ರಶೇಖರ ಘಂಟೆಪ್ಪಗೋಳ, ಫಯಾಜ್ ಕಲಾದಗಿ, ರಾಜೇಶ್ವರಿ ಹಿಪ್ಪರಗಿ, ಮೋಹನ ಹಿಪ್ಪರಗಿ, ಗಂಗಾಧರ ಗಾಂಧಿ, ರಿಯಾಜ್ ಫಾರೂಖಿ, ಬಾಳು ಜೇವೂರ ಮತ್ತಿತರಿದ್ದರು.