ಯಳಂದೂರು: ಉಪ್ಪಾರ ಸಮುದಾಯ ಶಿಕ್ಷಣದಿಂದ ದೂರ ಉಳಿದಿದ್ದು, ಸಮುದಾಯದವರು ಹೆಚ್ಚು ಶಿಕ್ಷಿತರಾಗಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜಋಷಿ ಭಗೀರಥ ಮಹರ್ಷಿ ನೂತನ ಹೆಬ್ಬಾಗಿಲು ಮತ್ತು ಕಳಸ ಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.
ನಮಗೆ ಹೆಮ್ಮೆಯಿಂದ ಬದುಕಲು ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ, ನಾವು ಇನ್ನೂ ಮೌಢ್ಯಾಚರಣೆಯಲ್ಲಿದ್ದೇವೆ, ನಮಗೆ ಶಿಕ್ಷಣ ಅವಶ್ಯಕವಾಗಿದೆ. ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಬೇಕು, ಮೌಢ್ಯತೆ, ಕಂದಾಚಾರಗಳಿಂದ ದೂರವಿರಬೇಕು ಎಂದು ಹೇಳಿದರು. ಶಿಕ್ಷಣದ ಜತೆಗೆ ಸಂಸ್ಕಾರವಂತರು, ಸಂಘಟಿತರಾಗಬೇಕು, ಹಣದ ದುರ್ಬಳಕೆಯನ್ನು ನಿಲ್ಲಿಸಬೇಕು, ದುಶ್ಚಟಗಳಿಂದ ದೂರವಿರಬೇಕು. ನಮ್ಮ ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಈಗಿರುವ ಶಾಸಕರು, ಮಂತ್ರಿಗಳು ಮನವಿ ಮಾಡಬೇಕು ಎಂದರು.
ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದರೂ ಇದರಲ್ಲಿ ನಿಗಧಿತ ಪ್ರಮಾಣದಲ್ಲಿ ಹಣವಿಲ್ಲದಿರುವುದರಿಂದ ಇದಕ್ಕೆ ಅನುದಾನ ನೀಡಬೇಕು, ನಮ್ಮ ಜನಾಂಗಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಬೇಕು ಎಂದರು.
ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಮ್ಮ ಜನಾಂಗದವರು ಕಂದಹಳ್ಳಿ ಗ್ರಾಮದಲ್ಲಿ ಒಗ್ಗಟ್ಟಾಗಿ ಮಾಡುತ್ತಿರುವ ಇಂತಹ ಕೆಲಸ ಇತರೆ ಗ್ರಾಮದವರಿಗೂ ಮಾದರಿಯಾಗಲಿ, ಈ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಈಗಾಗಲೇ ಕುಲಶಾಸ್ತ್ರ ಅಧ್ಯಯನವೂ ಮುಗಿದಿದ್ದು, ನಮಗೆ ಇನ್ನಷ್ಟು ಸೂಕ್ತ ಸ್ಥಾನಮಾನ ಸಿಗಬೇಕು. ನಾವು ಜಾಗೃತ ಸಮಾಜದವರಾಗಿ ಗುರುತಿಸಿಕೊಳ್ಳಬೇಕು. ನಮ್ಮನ್ನಿಟ್ಟುಕೊಂಡು ಮೋಸ, ವಂಚನೆ ಮಾಡುವ ಜನರಿದ್ದು, ಇವರಿಂದ ದೂರವಿರಬೇಕು ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ನನಗೆ ಕಳೆದ ಬಾರಿ ಬಂದಿದ್ದ ವಿಶೇಷ ಅನುದಾನದಲ್ಲಿ ಉಪ್ಪಾರ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ. ಪಟ್ಟಣದಲ್ಲಿ ಹೊಸದಾಗಿ ಭವನ ನಿರ್ಮಾಣ ಮಾಡಲು 50ಲಕ್ಷ ರೂ. ಹಣವನ್ನು ನೀಡಿದ್ದೇನೆ. ಇಲ್ಲಿಗೆ ಬೇಕಾಗುವ ಖಾಲಿ ಜಾಗದ ಬಗ್ಗೆ ಗೊಂದಲಗಳಿದ್ದು, ಆದಷ್ಟು ಬೇಗ ಅದು ಪೂರ್ಣಗೊಳ್ಳುತ್ತದೆ. ಆದಷ್ಟು ಬೇಗ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು. ಉಪ್ಪಾರ ಸಮುದಾಯದಲ್ಲಿ ನಮ್ಮ ಜಿಲ್ಲೆಯಿಂದಲೇ ಹೆಚ್ಚು ಜನರು ವಿಧಾನ ಪರಿಷತ್ತು ಸೇರಿದಂತೆ ವಿವಿಧ ನಿಗಮ, ಮಂಡಳಿಗಳಿಗೆ ಆಯ್ಕೆಯಾಗಿದ್ದಾರೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ನಾಲ್ಕು ಬಾರಿ, ಶಾಸಕರಾಗಿ, ಸಚಿವರಾಗಿ ಇನ್ನೂ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಈ ಬಾರಿಯ ಗೆಲುವಿನಲ್ಲಿ ಈ ಜನಾಂಗದ ಪಾತ್ರ ಹಿರಿಯದಾಗಿದೆ ಎಂದು ಬಣ್ಣಿಸಿದರು.
ಕಾರಾಪುರ ವಿರಕ್ತಮಠದ ಬಸವರಾಜಸ್ವಾಮಿ ಒಡೆಯರ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಮಾತನಾಡಿದರು. ಸಗರೂರಯ್ಯನ ಮಠದ ಮಹಾದೇವಸ್ವಾಮಿ, ಮಂಗಲ ಗಡಿಮನೆಯ ಮಂಜುನಾಥಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಜೆ.ಯೋಗೇಶ್, ಸಿದ್ದರಾಜು, ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ವೆಂಕೋಬಾ, ಲತಾಸಿದ್ದಶೆಟ್ಟಿ, ಸಿ.ಎ.ಮಹದೇವಶೆಟ್ಟಿ, ದುಗ್ಗಹಟ್ಟಿ ಪಿ.ವೀರಭದ್ರಪ್ಪ, ಹನುಮಂತಶೆಟ್ಟಿ, ಶಿವಕುಮಾರ್, ಮರಿಸ್ವಾಮಿ, ಕೆಸ್ತೂರು ಮಾದೇಶ್, ಬಾಗಳಿ ರೇವಣ್ಣ, ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಜೆ.ಶ್ರೀನಿವಾಸ್, ಲಿಂಗರಾಜು, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ತೋಟೇಶ್, ಕಿನಕಹಳ್ಳಿ ಪ್ರಭುಪ್ರಸಾದ್, ಗ್ರಾಮದ ಯಜಮಾನರು, ಯುವಕರ ಸಂಘಗಳ ಪ್ರತಿನಿಧಿಗಳು ಇತರರು ಇದ್ದರು.