ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಮಠಕ್ಕೆ ಆಗಮಿಸಿದ ದುಂಡಶಿ ಗ್ರಾಮದ ದಿಗಂಬರ ಜೈನ ಸಮಾಜದ ಭಕ್ತ ಸಮೂಹದೊಂದಿಗೆ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು.  
ಜಿಲ್ಲೆ

ಸರ್ವರಲ್ಲೂ ಆಸ್ತಿಕ ಭಾವ ವರ್ಧಿಸಲಿ

ರಿಪ್ಪನ್‌ಪೇಟೆ: ಸರ್ವರಲ್ಲಿಯೂ ಧಾರ್ಮಿಕ ಶ್ರದ್ಧೆ-ಭಕ್ತಿಯ ಆಸ್ತಿಕ ಭಾವ ವರ್ಧಿಸಬೇಕು ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಿಸಿದರು.

ಸಮೀಪದ ಹೊಂಬುಜ ಜೈನಮಠದಲ್ಲಿ ಶ್ರಾವಣ ಮಾಸದ ಶುಕ್ರವಾರದ ನಿಮಿತ್ತ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಇಷ್ಟಾರ್ಥ ನೆರವೇರಲು ಶ್ರದ್ಧಾ ಪೂರ್ವಕ ಪ್ರಾರ್ಥನೆ ಸಲ್ಲಿಸಿದ ಶ್ರೀಗಳು, ಸೀರೆ-ಉಡಿ-ಫಲ-ಪುಷ್ಪ-ಧಾನ್ಯಗಳಿಂದ ಹರಕೆ ಪೂಜೆ ಸಮರ್ಪಿಸಿದರು. ಜೈನಧರ್ಮ ಭಾರತ ದೇಶದಲ್ಲಿ ಅಹಿಂಸಾತ್ಮಕ ಸಾಮರಸ್ಯ ಜೀವನ ಮೌಲ್ಯವನ್ನು ಪ್ರತಿಪಾದಿಸುತ್ತ ಬಂದಿದೆ ಎಂದು ಶ್ರೀಗಳು, ಭಕ್ತವೃಂದದವರು ಧರ್ಮ-ಸಂಸ್ಕೃತಿಯ ರಕ್ಷಣೆಗಾಗಿ ತ್ಯಾಗ, ಸೇವೆ, ಪರೋಪಕಾರ, ದಾನ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕೆಂದರು. ಶ್ರೀ ಕ್ಷೇತ್ರದ ಜಗನ್ಮಾತೆ ಯಕ್ಷಿ ಪದ್ಮಾವತಿ ದೇವಿಯ ಅನುಗ್ರಹ ಭಕ್ತವೃಂದದವರ ಜೀವನ ಐಸಿರಿ ಆಗಲೆಂದು ಆಶೀರ್ವಾದ ಮಾಡಿದರು.
ಶಿರಹಟ್ಟಿಯ 100 ಜನ ಭಕ್ತವೃಂದದವರು 450 ಕಿಮೀ ಪಾದಯಾತ್ರೆಯಲ್ಲಿ ಆಗಮಿಸಿ ಪೂಜೆ ಮತ್ತು ಭೋಜನ ಸೇವೆ ಸಲ್ಲಿಸಿದರು. ಹಾವೇರಿ ಜಿಲ್ಲೆಯ ದುಂಡಶಿ ಗ್ರಾಮದ ದಿಗಂಬರ ಜೈನ ಸಮಾಜದ 50 ಜನ ಭಕ್ತ ಸಮೂಹ ಪಾದಯಾತ್ರೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ಸಮಾಜದ ಸಂಘಟನೆಯೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕಾಗಿ ಪ್ರಥಮ ವರ್ಷದಿಂದ ಈ ಪಾದಯಾತ್ರೆಯನ್ನು ಕೈಗೊಂಡಿರುವುದಾಗಿ ತಿಳಿಸಿದರು. ನಂತರ ಪಾದಯಾತ್ರಿಗಳನ್ನುದ್ದೇಶಿಸಿ ಆಶೀರ್ವದಿಸಿದ ಶ್ರೀಗಳು, ಸದೃಢ ಸಮಾಜದ ನಿರ್ಮಾಣಕ್ಕಾಗಿ ಯುವಕರು ಶ್ರಮಿಸಬೇಕು. ಜೈನ ಧರ್ಮದ ಆಚರಣೆ, ವ್ರತ, ನಿಯಮಗಳನ್ನು ಚಾಚೂತಪ್ಪದೆ ಎಲ್ಲರೂ ಪಾಲಿಸಬೇಕೆಂದು ಸಲಹೆ ನೀಡಿದರು.
ನವಧಾನ್ಯ, ಸಿರಿಧಾನ್ಯ, ಫಲ-ಪುಷ್ಪಗಳ 108 ವಿಧಗಳಲ್ಲಿ ಶ್ರೀ ಪದ್ಮಾವತಿ ದೇವಿಗೆ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು. ದೇವಿ ಅಲಂಕಾರವನ್ನು ಕಣ್ತುಂಬಿಕೊಂಡರು. ಅಷ್ಟವಿಧಾರ್ಚನೆ ಪೂಜೆಯ ಬಳಿಕ ಭಕ್ತರು ವಿವಿಧ ಹರಕೆ ಪೂಜೆ ಸಲ್ಲಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ಜತೆಗೆ ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಆಂಧ್ರಪ್ರದೇಶದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸಂಪ್ರದಾಯದಂತೆ ದೇವಿಗೆ ಉಡಿ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.