ಮದ್ದೂರು: ದೇವರು ಸರ್ವರಿಗೂ ಒಳ್ಳೆಯದನ್ನು ಮಾಡಲಿ ಹಾಗೂ ಸಮೃದ್ಧಿಯಾಗಿ ಮಳೆ ಬಂದು ರೈತಾಪಿ ವರ್ಗಕ್ಕೆ ಸಂತಸ ತರಲೆಂದು ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಪ್ರಕಾಶ್ ಪ್ರಾರ್ಥಿಸಿದರು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ನವದುರ್ಗಿಯರ ವೇಷ ಭೂಷಣ ಸ್ಪರ್ಧೆ ಹಾಗೂ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ವಿಶೇಷವಾಗಿ ದೇವರ ಪೂಜೆ ಮಾಡುವುದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ದೇವರಿಗೆ ಪೂಜೆ ಮಾಡುವುದರಿಂದ ನಾಡಿನಲ್ಲಿ ಸುಖ, ಶಾಂತಿ ನೆಲೆಸಿ, ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ ಎಂದರು.
ನವರಾತ್ರಿಯ ಅಂಗವಾಗಿ ವಿದ್ಯಾರ್ಥಿಗಳು ನವದುರ್ಗಿಯರ ವೇಷ ಭೂಷಣದಲ್ಲಿ ಪಾಲ್ಗೊಂಡು ಗಮನಸೆಳೆದರು. ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರರಾವ್ ನೇತೃತ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಶಿವ-ಪಾರ್ವತಿ ಉತ್ಸವ, ವಿಶಾಲಾಕ್ಷಿ ಅಮ್ಮನವರಿಗೆ ಮಹಾಮಂಗಳಾರತಿ ಮಾಡಿದ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಪ್ರಧಾನ ಅರ್ಚಕ ರಾಘವೇಂದ್ರರಾವ್, ಸಾಹಿತಿ ಗುಣವಂತ ಮಂಜು, ಶಂಕರ ಸಭಾ ಅಧ್ಯಕ್ಷ ಗುರುಸ್ವಾಮಿ, ತಾಲೂಕು ಬ್ರಾಹ್ಮಣ ಸಭಾ ಕಾರ್ಯದರ್ಶಿ ಸತ್ಯನಾರಾಯಣ್ ರಾವ್, ಶಿವರಾಮು, ಬಿ.ವಿ.ಮಂಜುನಾಥ್, ಸುನೀಲ್, ಭರತ್, ಶೋಭಾ ಪ್ರದೀಪ್, ನರಸಿಂಹಪ್ರಸಾದ್, ಕೆ.ಆರ್.ಮಂಜುನಾಥ್ ಇದ್ದರು.