ಶಿರಸಿ: ವ್ಯಾವಹಾರಿಕ ಚಿಂತನೆಗಳಲ್ಲಿ ಮುಳುಗಿರುವ ಮನುಷ್ಯನನ್ನು ಐತಿಹಾಸಿಕ ಚಿಂತನೆಯೆಡೆ ಒಯ್ಯುವ ಶಕ್ತಿ ಯಕ್ಷಗಾನ ಕಲೆಗಿದೆ ಎಂದು ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಸ್ವರ್ಣವಲ್ಲೀಯಲ್ಲಿ ಎರಡು ದಿನಗಳ ಯಕ್ಷೋತ್ಸವದಲ್ಲಿ ಭಾನುವಾರ ಅವರು ಮಾತನಾಡಿದರು. ವರ್ತಮಾನ ಕಾಲದ ವಿಷಯವನ್ನು ಬಿಂಬಿಸುವ ಅನೇಕ ಕಲೆಗಳಿವೆ. ಯಕ್ಷಗಾನ ಎಂಬ ದಿವ್ಯವಾದ ಕಲೆಗೆ ಹೊಸ ತಲೆಮಾರಿನ ಕಲಾವಿದರು ಸೃಷ್ಟಿಯಾಗಬೇಕು. ಯಕ್ಷೋತ್ಸವದ ಕೇಂದ್ರ ಬಿಂದು ಮಕ್ಕಳಾಗಿದ್ದಾರೆ. ಆಧುನಿಕ ಕಾಲದ ಮೊಬೈಲ್, ದೂರದರ್ಶನ ಹವ್ಯಾಸ ಅಂಟಿದೆ. ಇದರಿಂದ ಅನೇಕ ಅನಾರೋಗ್ಯ ಉಂಟಾಗಿದೆ. ಮಕ್ಕಳ ಮೇಲೆ ಯಕ್ಷಗಾನ ಪ್ರಭಾವ ಬೀರಬೇಕು ಎಂಬುದು ಯಕ್ಷ ಶಾಲ್ಮಲಾ ಒತ್ತಾಸೆ ಎಂದರು.
ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ಯಕ್ಷಗಾನದಲ್ಲಿ ಪದ್ಯಗಳು ಪ್ರಧಾನವಾಗಿದ್ದು, ಪುರಾಣದ ಕಥೆಗಳು ಪದ್ಯದ ರೂಪದಲ್ಲಿ ಹೇಳಲ್ಪಟ್ಟಿದೆ. ಯಕ್ಷಗಾನಗಳೆಲ್ಲವೂ ಪುರಾಣ, ರಾಮಾಯಾಣಾದಿಗಳಿಂದ ಹೊರಡಲ್ಪಟ್ಟ ಕಾವ್ಯಗಳ ಸಮಗ್ರ ಸಾರಾಂಶವಿದೆ. ಪ್ರತಿಯೊಂದು ಯಕ್ಷಗಾನದ ಆಖ್ಯಾನಗಳಲ್ಲಿ ಜೀವನದ ಪಾಠವನ್ನು ಕಾಣಬಹುದು. ಮೋಕ್ಷದೆಡೆ ಸಾಗಬೇಕೆಂಬ ತತ್ವವನ್ನು ಸಾರುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಸುಲಭವಾಗಿ ಅರ್ಥವಾಗಬೇಕಾದರೆ ಯಕ್ಷಗಾನ ಹೆಚ್ಚೆಚ್ಚು ನೋಡಬೇಕು. ಸಂಸ್ಕೃತಿಯ ಪರಿಚಯವಾದಾಗ ಮಕ್ಕಳು ಬುದ್ಧಿವಂತರಾಗಿ, ಧೈರ್ಯಶಾಲಿಗಳಾಗುತ್ತಾರೆ. ಯಕ್ಷಗಾನ ಕಲೆಯನ್ನು ಶಾಸ್ತ್ರೀಯ ಕಲೆ ಎಂದು ಸರ್ಕಾರ ಘೊಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶೀನ್ಮನೆ ಮಾತನಾಡಿದರು. ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿಯನ್ನು ಕೆ.ಜಿ. ಮಂಜುನಾಥ ಕೆಳಮನೆ ಅವರಿಗೆ ಪ್ರದಾನ ಮಾಡಲಾಯಿತು.
ಯಕ್ಷ ಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷೋತ್ಸವದ ಪಕ್ಷಿನೋಟದ ಕುರಿತು ಎಂ.ಎನ್. ಹೆಗಡೆ ಹಳವಳ್ಳಿ ಮಾತನಾಡಿದರು.
ಸನ್ಮಾನ ಪತ್ರವನ್ನು ಗುರುಪ್ರಸಾದ ಹೆಗಡೆ ವಾಚಿಸಿದರು. ಯಕ್ಷಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ಶ್ರೀನಿವಾಸ ಮತ್ತಿಘಟ್ಟ ನಿರೂಪಿಸಿದರು. ನಿರ್ಣಾಯಕರ ಪರವಾಗಿ ಚಂದ್ರಕಲಾ ಭಟ್ಟ ಮಾತನಾಡಿದರು.
ಯಕ್ಷಗಾನ ಕಲೆಯೋ ಅಥವಾ ಶಾಸ್ತ್ರೀಯ ಕಲೆಯೋ ಎಂಬ ಜಿಜ್ಞಾಸೆಯನ್ನು ಬದಿಗಿಟ್ಟು ನಮ್ಮ ಕಲೆ ಎಂಬ ಪ್ರೀತಿ ವಿಶ್ವಾಸವಿಟ್ಟರೆ ಕಲೆ ಇನ್ನಷ್ಟು ಬೆಳೆಯುತ್ತದೆ. -ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ