ಹಾಸನ: ದೇವರು ನೀಡಿರುವ ಬಲಿಷ್ಠ ಶಕ್ತಿಯನ್ನು ಧರ್ಮ ರಕ್ಷಣೆಗೆ ಬಳಸಿಕೊಳ್ಳಬೇಕು ಎಂದು ಅಭೀಕ್ಷಣ ಜ್ಞಾನಭಾಸ್ಕರ ವಾತ್ಸಲ್ಯ ಮೂರ್ತಿ ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜರು ಹೇಳಿದರು.
ನಗರದ ಮಹಾವೀರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜೈನ ಮಂಡಳಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಧರ್ಮ ಸಂರಕ್ಷಣೆಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮುಖ್ಯವಾದದ್ದು. ಪೂರ್ವ ಜನ್ಮದ ಪುಣ್ಯದ ಫಲವಾಗಿ ಇಂದು ಸಂಸ್ಥೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಈಗ ಮಾಡಿದ ಪುಣ್ಯ ಮುಂದಿನ ಜನ್ಮಕ್ಕೆ ಫಲ ನೀಡಲಿದೆ ಎಂದು ಹೇಳಿದರು.
ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನ ಮಂಡಳಿ ಪತ್ತಿನ ಸಹಕಾರ ಸಂಘ ನೂರು ವರ್ಷ ಪೂರೈಸಿರುವುದು ಸಂತಸದ ವಿಚಾರ ಎಂದರು.
ಜೈನ ಸಮುದಾಯದ ಉಳಿವಿಗೆ ಸಮಾಜದವರು ಒಗ್ಗಟ್ಟಿನ ಮಂತ್ರ ಜಪಿಸುವುದು ಅನಿವಾರ್ಯವಾಗಿದೆ. ಸಮಾಜದ ಕುರಿತು ಔದಾರ್ಯತೆ ಬೆಳೆಸಿಕೊಳ್ಳಬೇಕು. ಮಹಾವೀರ ತೀರ್ಥಂಕರರು ಕೂಡ ಇದೇ ವಿಷಯಕ್ಕಾಗಿ 2 ಸಾವಿರ ವರ್ಷಗಳಿಂದ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.
ಶಾಸಕನಾಗಿ ಇರುವಷ್ಟು ದಿನ ಜೈನ ಸಮುದಾಯದ ಏಳಿಗೆಗೆ ವಾರ್ಷಿಕ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘ ಯಶಸ್ವಿಯಾಗಿ 100 ವರ್ಷ ಪೂರೈಸುವ ಮೂಲಕ ದುರ್ಬಲರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಇದು ಸಮುದಾಯದ ಬದ್ಧತೆಯನ್ನು ತೋರಿಸುತ್ತದೆ. ಸಮ ಸಮಾಜ, ಸುಂದರ ಬದುಕು ಕಟ್ಟಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು. ಸಾಧು ಸಂತರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.
ಮಂಡ್ಯ ಜಿಲ್ಲೆ ಆರತಿಪುರ ಜೈನ ಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದರು.