ಜಿಲ್ಲೆ

ಮಾವಿನ ತಳಿ ಉಳಿಸುವ ಕಾರ್ಯವಾಗಲಿ

ವೀರೇಶ ಸೌದ್ರಿ

ಶಿರಸಿ: ಮರೆತು ಹೋದ, ಅಳಿವಿನಂಚಿನಲ್ಲಿರುವ ಮಾವಿನ ತಳಿಗಳನ್ನು ಉಳಿಸುವ ಕಾರ್ಯವಾಗಬೇಕು. ಸಸ್ಯ ಸಂರಕ್ಷಣೆ ಬಗ್ಗೆ ರೈತರಿಗೆ ಮಾಹಿತಿ ನೀಡುವ ಅಗತ್ಯವಿದೆ ಎಂದು ಬರಹಗಾರ ಶಿವಾನಂದ ಕಳವೆ ಹೇಳಿದರು.

ನಗರದ ಕದಂಬ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಆಯೋಜಿಸಿರುವ ಸಸ್ಯ ಸಂತೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಶಿರಸಿ ಸೀಮೆಯಲ್ಲಿ ಉಷ್ಣ ವಲಯದ ಸಸ್ಯಗಳೂ ಚೆನ್ನಾಗಿ ಬೆಳೆಯುತ್ತವೆ. ಕಳವೆ ಬೆಟ್ಟದಲ್ಲಿ ಬಹು ಹಣ್ಣಿನ ಗಿಡಗಳನ್ನು ಬೆಳೆಸಿದ್ದು, ಅನುದಿನವೂ ಹಣ್ಣಿಗೆ ಕೊರತೆ ಆಗದಂತೆ ಆಗಿದೆ. ನಾವೇ ಬೆಳಸಿಕೊಂಡ ಆರೋಗ್ಯಪೂರ್ಣ ಹಣ್ಣುಗಳನ್ನು ತಿಂದರೆ ಔಷಧದ ಖರ್ಚೂ ಉಳಿಯುತ್ತವೆ ಎಂದರು.

ಹದಿನಾಲ್ಕು ವರ್ಷಗಳಿಂದ ನಿರಂತರವಾಗಿ ಸಸ್ಯ ಸಂತೆ ನಡೆಸುವ ಮೂಲಕ ಕದಂಬ ವೃಕ್ಷಪ್ರೀತಿಯ ಗುಣ ಬೆಳಸುತ್ತಿದೆ. ರೈತರು ಹೇಗೆ ಸಸ್ಯ ಬೆಳೆಸಿದ್ದಾರೆ ಎಂಬ ಅನುಭವ ಮಾಹಿತಿ ಕೂಡ ಇಂಥ ಸಂತೆಗಳು ನೀಡಲಿವೆ ಎಂದರು.

ಸಂಸ್ಥೆಯ ಪ್ರಮುಖ ವಿಶ್ವೇಶ್ವರ ಭಟ್ಟ ಕೋಟೆಮನೆ ಮಾತನಾಡಿ, ಸಸ್ಯ ಸಂತೆಯಲ್ಲಿ 20ಕ್ಕೂ ಅಧಿಕ ಹಲಸಿನ ತಳಿಗಳು, ಕಾಳುಮೆಣಸು, ಏಲಕ್ಕಿ, ತೆಂಗು, ಲಿಂಬು, ಮಾವು ಮತ್ತಿತರ ಗಿಡಗಳಿವೆ. ಮಾಸಾಂತ್ಯದ ತನಕ ಸಸ್ಯ ಸಂತೆ ನಡೆಯಲಿದೆ ಎಂದರು.

ನರಹರಿ ಕುಳಿಮನೆ, ಕದಂಬದಿಂದಲೇ ಖರೀದಿಸಿ ನೆಟ್ಟು ಬೆಳಸಿದ ಮಲ್ಲಿಕಾ ಮಾವು ಫಲ ಕೊಡುತ್ತಿದೆ ಎಂದರು.

ಕದಂಬದ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ, ಕೃಷಿ ವಿಜ್ಞಾನಿಗಳ ಸಂಶೋಧನೆ ರೈತರ ಜಮೀನಿಗೆ ಬರಬೇಕು. ಕಪಾಟಿನಲ್ಲಿ ಇದ್ದರೆ ಪ್ರಯೋಜನ ಇಲ್ಲ ಎಂದರು.

ಪ್ರಗತಿಪರ ಕೃಷಿಕ ಚಿನ್ಮಯ ಹೆಗಡೆ, ಬೀಜ ತಳಿ ಸಂರಕ್ಷಕ ಆರ್.ಜಿ. ಭಟ್ಟ ದೇವತೆಮನೆ, ಸಂಸ್ಥೆ ಪ್ರಭಾರ ವ್ಯವಸ್ಥಾಪಕ ರಾಜೇಂದ್ರ ಜೋಶಿ, ಮಂಜುನಾಥ ಮಾವಿನಕೊಪ್ಪ ಇತರರು ಇದ್ದರು.