ಜಿಲ್ಲೆ

ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗಿರಲಿ

ಉತ್ತರ ಕನ್ನಡ ಡೆಸ್ಕ್

ಅಂಕೋಲಾ: ಕನ್ನಡ ನೆಲದಲ್ಲಿ ಕನ್ನಡತನ ಗಟ್ಟಿಯಾಗಿರಬೇಕು. ಕನ್ನಡದ ಉಳಿವಿಗಾಗಿ ಕನ್ನಡಿಗರೇ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಆರ್. ಜಿ.ಗುಂದಿ ಹೇಳಿದರು.

ಬೊಬ್ರುವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಅಂಕೋಲಾ ಘಟಕದವರು ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ಶುದ್ಧ ಬರಹ ಮತ್ತು ಸ್ಪಷ್ಟ ಉಚ್ಛಾರ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತೀಕರಣದಿಂದ ಇಂಗ್ಲಿಷ್ ಭಾಷೆಯ ಬಳಕೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ವ್ಯಾವಹಾರಿಕವಾಗಿ ಇಂಗ್ಲಿಷ್ ಬಳಕೆ ಇರಲಿ. ಆದರೆ, ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗಬೇಕು. ನಾವು ಕನ್ನಡಿಗರೇ ಕನ್ನಡತನವನ್ನು ಉಳಿಸಿಕೊಳ್ಳದಿದ್ದರೆ ಕನ್ನಡವನ್ನು ಉಳಿಸುವವರಾರು ಎಂದರು.

ನಿವೃತ್ತ ಪ್ರಾಚಾರ್ಯ ಮೋಹನ ಹಬ್ಬು ಮಾತನಾಡಿ, 1965ರಲ್ಲಿ ಭಾಷಾ ನೀತಿಯಲ್ಲಿ ರಾಜ್ಯ ವಿಂಗಡನೆಯಾದ ನಂತರ ಭಾಷೆಗಳ ಕುರಿತು ಸ್ಪಷ್ಟ ನಿಲುವು ತಾಳಲು ಯಾವ ಸರ್ಕಾರಗಳೂ ಪ್ರಯತ್ನಿಸಲಿಲ್ಲ. ಅದರ ಫಲವಾಗಿಯೇ ಇಂದು ಪರಭಾಷೆಗಳು ಕನ್ನಡದ ಮೇಲೆ ಆಕ್ರಮಣ ಮಾಡುತ್ತಿವೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಕಾಲೇಜ್‌ನ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ, ಮಹಾಂತೇಶ ರೇವಡಿ ಮಾತನಾಡಿದರು. ಲೇಖಕ ಸುಜೀತ ನಾಯ್ಕ, ಎಂ.ಬಿ. ಆಗೇರ, ಉಪನ್ಯಾಸಕಿ ಡಾ.ಪುಷ್ಪಾ ನಾಯ್ಕ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗಜೇಂದ್ರ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ವಿಜಯ ನಾಯ್ಕ, ಉಪಾಧ್ಯಕ್ಷೆ ರಂಜಿತಾ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ಬಾಲಚಂದ್ರ ನಾಯಕ ಭಾವಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಾಧ್ಯಾಪಕಿ ಮಾರುತಿ ಲಕ್ಷೇಶ್ವರ, ವಿದ್ಯಾರ್ಥಿನಿ ಉನ್ನತಿ ನಾಯ್ಕ ನಿರ್ವಹಿಸಿದರು.