ಶಿರಸಿ: ಯಜ್ಞದ ಮೂಲಕ ಭಗವಂತನ ಸತ್ಕರಿಸುವ ಕಾರ್ಯ ಆಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಂಕಲ್ಪಿತ ಚಾತುರ್ವಸ್ಯ ವ್ರತಾಚರಣೆಯಲ್ಲಿ ಕರೂರು ಸೀಮೆಯ ಶಿಷ್ಯರು ಸಲ್ಲಿಸಿದ ಭೀಕ್ಷಾ ಸೇವೆ ಸ್ವೀಕರಿಸಿ ಭಾನುವಾರ ಆಶೀರ್ವಚನ ನೀಡಿದರು.
ಕೃಷ್ಣನ ಸಂದೇಶಗಳಲ್ಲಿ ಯಜ್ಞ ಪ್ರಧಾನ ಸಂದೇಶವಾಗಿದೆ. ಯಜ್ಞದ ಮೂಲಕ ದೇವತೆಗಳ ಸತ್ಕರಿಸಿದರೆ ಭಕ್ತರ ಮೊರೆ ಈಡೇರಿಸಲು ಸಾಧ್ಯ. ಬೇಡಿಕೆ ಈಡೇರಿಸಿದ ಬಳಿಕ ಮರಳಿ ಏನಾದರೂ ಭಗವಂತನಿಗೆ ಪುನಃ ಕಿಂಚಿತ್ತಾದರೂ ಕೊಡಬೇಕು. ಕೃತಜ್ಞಾ ಭಾವದಲ್ಲಿ ತಿರುಗಿ ನೀಡದೇ ಹೋದರೆ ಅವನಿಟ್ಟ ಪ್ರೀತಿಯಲ್ಲಿ ಲೋಪ ಆಗುತ್ತದೆ ಎಂದ ಅವರು, ಯಜ್ಞದಿಂದ ಅನೇಕ ಪ್ರಯೋಜನಗಳು ಆಗಲಿವೆ. ಈ ಬಗ್ಗೆ ಸಾಕಷ್ಟು ದೃಷ್ಟಾಂತಗಳೂ ಇವೆ ಎಂದು ವಿವರಿಸಿದರು.
ನಮ್ಮ ಜನರಿಗೆ ವೇದಗಳ ಜ್ಞಾನ ಇಲ್ಲ. ವೇದಗಳಿಂದ ದೂರ ಆಗುತ್ತಿದ್ದೇವೆ. ಇದರಿಂದ ನಮಗೆಲ್ಲ ಧರ್ಮದ ಜಿಜ್ಞಾಸೆಗಳು ಆಗುತ್ತವೆ. ವೇದದಿಂದ ದೂರವಾಗಿದ್ದು, ಅನೇಕ ಸಮಸ್ಯೆಗಳಿಗೆ ಕಾರಣ. ವೇದಗಳ ಕೊರತೆ ನಿವಾರಿಸಿಕೊಳ್ಳಲು ಭಗವದ್ಗೀತೆ ಒಂದೊಳ್ಳೆ ಸಾಧನ ಎಂದು ಹೇಳಿದ ಅವರು, ಭಗವಂತ ಸೃಷ್ಟಿಯಲ್ಲಿ ಒಂದು ಲಯ ಇಟ್ಟಿದ್ದಾನೆ. ಅದಕ್ಕೆ ಹೊಂದಿಕೊಂಡು ಬದುಕಬೇಕು ಎಂದರು.
ಲಯ ಎಂದರೆ ಕ್ರಮಬದ್ಧತೆ ಎಂದು ಹೇಳಬಹುದು. ಆ ಲಯಕ್ಕೆ ಹೊಂದಿಕೊಂಡರೆ ಜೀವನದ ಉದ್ದಕ್ಕೂ ಹೊಂದಿಕೊಂಡರೆ ನಾವು ಲಯವಾಗುವಾಗಲೂ ಸರಿಯಾದ ಕ್ರಮ ಆಗುತ್ತದೆ. ಲಯ ಎಂದರೆ ಎರಡರ್ಥವಿದೆ. ಒಂದು ಕ್ರಮ ಬದ್ಧತೆ, ಇನ್ನೊಂದು ಸೇರಿಕೊಳ್ಳುವುದು ಎಂದರ್ಥ. ನಮ್ಮ ಕೊನೆಗಾಲದಲ್ಲಿ ಸರಿಯಾದ ಕ್ರಮದಲ್ಲಿ ಲಯ ಆಗುತ್ತದೆ. ಭಗವಂತ ಹಾಕಿದ ಲಯಕ್ಕೆ ತಕ್ಕಂತೆ ಇರಬೇಕು. ಕಾಲದ ಲಕ್ಷಣಗಳು ಅವನು ಹಾಕಿದ ಲಯ. ಅದಕ್ಕೆ ಹೊಂದಿಕೊಂಡು ಹೋಗಬೇಕು ಎಂದು ವಿವರಿಸಿದರು.
ಈ ವೇಳೆ ಕರೂರು ಸೀಮೆ ಅಧ್ಯಕ್ಷ ಉಮಾಪತಿ ಭಟ್ಟ ಮತ್ತಿಗಾರ, ಎಂ.ಆರ್. ಹೆಗಡೆ ಮತ್ತಿಹಳ್ಳಿ, ಗಣಪತಿ ಹೆಗಡೆ ಕೊಡಗಿಪಾಲ್, ನಾರಾಯಣ ಭಟ್ಟ ಬಳ್ಳಿ, ವಿ.ಎಂ. ಹೆಗಡೆ ತ್ಯಾಗಲಿ, ಗಣಪತಿ ಭಟ್ಟ ಟೊಣ್ಣೇಮನೆ, ಮಂಜುನಾಥ ಹೆಗಡೆ ಪಟ್ಟಿಗುಂಡಿ ಇತರರು ಇದ್ದರು.