ಗೋಕರ್ಣ: ಸಹಸ್ರಾರು ವರ್ಷಗಳ ವೇದ ಮತ್ತು ಪೌರಾಣಿಕ ಸಂಸ್ಕೃತಿಯ ಪರಂಪರೆಯನ್ನು ಪಡೆದುಕೊಂಡ ದಕ್ಷಿಣ ಭಾರತದ ಅಪರೂಪದ ಕ್ಷೇತ್ರ ಗೋಕರ್ಣ. ಯಾವುದೇ ಭೇದ-ಭಾವಗಳಿಲ್ಲದೆ ಸರ್ವರೂ ಇಲ್ಲಿನ ಪೂರ್ವ ಪರಂಪರೆ ಮುಕ್ಕಾಗದಂತೆ ಸಂರಕ್ಷಣಾ ಕಾರ್ಯಕ್ಕೆ ಮುಂದಾಗುವಂತಾಗಲಿ ಎಂದು ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎನ್. ಶ್ರೀಕೃಷ್ಣ ಹೇಳಿದರು.
ಮಂದಿರದ ಪ್ರಧಾನ ಅರ್ಚಕ ವೇ.ಗಣಪತಿ ಗ.ಹಿರೇ ಅವರು ಸಂಪಾದಿಸಿ ಮುದ್ರಿಸಿರುವ ಶ್ರೀಗಾವಲ ಮಹರ್ಷಿಗಳಿಂದ ಸಾವಿರಾರು ವರ್ಷ ಹಿಂದೆ ವಿರಚಿತವಾದ ‘ಶ್ರೀಮಹಾಬಲೇಶ್ವರ ಅಷ್ಟೋತ್ತರ ಶತನಾಮ’ ಸ್ತೋತ್ರವನ್ನು ಮಹಾಬಲೇಶ್ವರ ಆತ್ಮಲಿಂಗಕ್ಕೆ ಸಮರ್ಪಿಸುವ ಮೂಲಕ ಬಿಡುಗಡೆಗೊಳಿಸಿ ಮಾತನಾಡಿದರು.
ಸ್ಥಳೀಯ ವೈದಿಕವೃಂದ ಅನಾದಿಯಿಂದಲೂ ಭಕ್ತರನ್ನು ಪ್ರೀತಿಯಿಂದ ನೋಡಿಕೊಂಡು ಪೂಜಾದಿಗಳನ್ನು ನಿರ್ವಹಿಸುವ ಪದ್ಧತಿಯಿದೆ. ಈ ಪದ್ಧತಿ ಸೇರಿದಂತೆ ಮಂದಿರದ ವತಿಯಿಂದ ಭಕ್ತರ ಭಕ್ತಿ-ಭಾವಗಳ ಸಂವೃದ್ಧಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮುಂದಿನ ದಿನಗಳಲ್ಲಿ ಅಣಿಗೊಳಿಸಲು ಪ್ರಯತ್ನಿಸಲಾಗುವುದು. ಜತೆಗೆ ಮಂದಿರದಲ್ಲಿ ಆಗಬೇಕಾದ ಅಭಿವೃದ್ಧಿಗಳತ್ತ ಕೂಡ ಕಾರ್ಯೋನ್ಮುಖವಾಗಲಾಗುವುದು ಎಂದರು.
ಮಂದಿರದ ಪ್ರಧಾನ ಅರ್ಚಕ ವೇ.ಗಜಾನನ ಹಿರೇ, ವೇ.ಅನಂತರಾಜ ಅಡಿ, ವೇ.ಶ್ರೀನಿವಾಸ ಅಡಿ, ವೇ.ಗಣಪತಿ ಗ.ಹಿರೇ ಮುಂತಾದವರು ಪೂಜೆ ಮತ್ತು ಪುಸ್ತಕ ಅರ್ಪಣೆಯನ್ನು ನಿರ್ವಹಿಸಿದರು.
ವೇ.ಅನಂತ ಅಡಿ, ವೇ.ರವಿ ಸೂರಿ, ಮಂದಿರ ಸಮಿತಿ ಸದಸ್ಯರಾದ ವೇ. ಗಣಪತಿ ಶಿವರಾಮ ಹಿರೇ, ವೇ.ಸುಬ್ರಹ್ಮಣ್ಯ ಅಡಿ,ವೇ.ಪರಮೇಶ್ವರ ಪ್ರಸಾದ, ಮಹೇಶ ಹಿರೇಗಂಗೆ ಇತರರಿದ್ದರು.