ಸಿದ್ದಾಪುರ: ಶಿಕ್ಷಕರು ಕೊನೆಯ ತನಕವೂ ವಿದ್ಯಾರ್ಥಿಯಾಗಿದ್ದು ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ಆಗ ಮಾತ್ರ ಕಲಿಸುವಿಕೆಯಲ್ಲಿ ನಾವೀನ್ಯತೆ ಬರಲು ಸಾಧ್ಯ ಎಂದು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ ಹೇಳಿದರು.
ಪಟ್ಟಣದ ಹಾಳದಕಟ್ಟಾ ಮುರುಘರಾಜೇಂದ್ರ ಅಂಧಮಕ್ಕಳ ವಸತಿ ಶಾಲೆ ಸಭಾಂಗಣದಲ್ಲಿ ಸೋಮವಾರ ಪ್ರೌಢಶಾಲೆಯ ಆಂಗ್ಲ ಹಾಗೂ ಗಣಿತ ವಿಷಯಗಳ ಬೋಧನಾ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಳವಾದ ಅಭ್ಯಾಸ ಚಿಂತನೆ ಮುಖ್ಯ. ತಾನು ಬೋಧಿಸುವ ವಿಷಯದ ಅಭ್ಯಾಸದೊಂದಿಗೆ ಹೊಸ ಆವಿಷ್ಕಾರ ಬಳಸಿಕೊಂಡು ಬೋಧಿಸುವುದರಿಂದ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಬಿಇಒ ಎಂ.ಎಚ್. ನಾಯ್ಕ ಮಾತನಾಡಿ, ನಮ್ಮ ಬೋಧನೆಯಲ್ಲಿ ಹೊಸ ಸಂಗತಿಗಳ ಅಳವಡಿಕೆ ಅಗತ್ಯ. ಇಂದು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಿದ್ಧತೆಗೊಳಿಸುವಾಗ, ತಂತ್ರಜ್ಞಾನ, ವಿಷಯ ನಾವೀನ್ಯತೆ ತೀರಾ ಅಗತ್ಯ. ಶಿಕ್ಷಕರು ಇದನ್ನು ಸಂಗ್ರಹಿಸಿಕೊಂಡು ಬೋಧಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಉನ್ನತವಾದುದು. ಅವರು ಹೆಚ್ಚು ಜ್ಞಾನವಂತರಾಗಿ, ಶೈಕ್ಷಣಿಕ ಕೌಶಲಗಳನ್ನು ಅರಿತು ಬೋಧಿಸುವಂತಾಗಬೇಕು ಎಂದು ಹೇಳಿದರು.
ಲಯನ್ಸ್ ವಲಯ ಅಧ್ಯಕ್ಷೆ ಶಾಮಲಾ ಹೆಗಡೆ ಹೂವಿನಮನೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಂ.ವಿ. ನಾಯ್ಕ, ಲಯನ್ಸ್ ಜಿಲ್ಲಾ ಚೇರ್ಮನ್ ಸತೀಶ ಗೌಡರ್ ಹೆಗ್ಗೋಡಮನೆ, ಕೋಶಾಧ್ಯಕ್ಷ ಆಕಾಶ ಹೆಗಡೆ ಗುಂಜಗೋಡ, ಸಂಪನ್ಮೂಲ ವ್ಯಕ್ತಿಗಳಾದ ಧರ್ವನಂದ ಭಟ್ಟ ಶಿರಸಿ, ಜಗದಂಬಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೃಷ್ಣಮೂರ್ತಿ ಹೆಗಡೆ ಸರಕುಳಿ, ಬೇಡ್ಕಣಿ ಜನತಾ ವಿದ್ಯಾಲಯ ಶಿಕ್ಷಕ ಜಿ.ಟಿ. ಭಟ್ಟ ಅವರು ಉಪಸ್ಥಿತರಿದ್ದರು. ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರು ವಂದಿಸಿದರು.