ಸಿದ್ದಾಪುರ: ಸಮಾಜದ ಸಂಘಟನೆ ಪ್ರಬಲವಾಗಿದ್ದರೆ ಒಳ್ಳೆಯ ಕಾರ್ಯ ಮಾಡಲು ಸಾಧ್ಯ. ಸಂಘಟಕರು ಚೆನ್ನಾಗಿರಬೇಕಾದರೆ ನಿತ್ಯ ನಿರಂತರವಾಗಿ ಕಾರ್ಯಚಟುವಟಿಕೆ ನಡೆಸಲು ಸ್ವಂತ ಸ್ಥಳ ಅತ್ಯವಶ್ಯ. ಇದಕ್ಕೆ ಇಚ್ಚಾಶಕ್ತಿ ಬೇಕು ಎಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ತಾಲೂಕು ಹವ್ಯಕ ಮಹಾಸಭೆ ಹವ್ಯಕ ಸಭಾಭವನ ನಿರ್ವಣದ ಕುರಿತು ಭಾನುವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಂಡವರನ್ನು ದೇವರು ಚೆನ್ನಾಗಿ ಇಡುತ್ತಾನೆ. ಎಲ್ಲ ಕಡೆ ಹವ್ಯಕ ಸಭಾಭವನ ನಿರ್ವಣವಾಗಬೇಕು. ಆ ಮೂಲಕ ನಮ್ಮ ಸಮಾಜದ ಸಂಘಟನೆ ಆಗಬೇಕು. ನಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಹವ್ಯಕ ಸಭಾಭವನ ನಿರ್ಮಾಣ ಕಾರ್ಯಕ್ಕೆ ಹವ್ಯಕರೆಲ್ಲರೂ ಮುಂದಾಗಬೇಕು ಹಾಗೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಹವ್ಯಕ ಮಹಾಸಭೆಯ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಹವ್ಯಕರಿಗೆ ಮೂಲಸೌಕರ್ಯದ ಕೊರತೆ ಇದೆ. ಪಟ್ಟಣದ ಶಂಕರ ಮಠ ಹೊರತುಪಡಿಸಿ ಸಭೆ ಸಮಾರಂಭಗಳನ್ನು ನಡೆಸಲು ವ್ಯವಸ್ಥಿತವಾದ ಸಭಾಭವನ ಇಲ್ಲವಾಗಿದೆ. ಆದ್ದರಿಂದ ಭವಿಷ್ಯದ ಹಿತದೃಷ್ಟಿಯಿಂದ ಪಟ್ಟಣದಲ್ಲಿ ಒಂದು ವ್ಯವಸ್ಥಿತವಾದ ಸಭಾಭವನ ನಿರ್ವಣವಾಗಬೇಕು. ಇದಕ್ಕಾಗಿ ಈಗಾಗಲೇ ಕೋಲಸಿರ್ಸಿ ಕ್ರಾಸ್ನಲ್ಲಿ 14 ಗುಂಟೆ ಜಾಗ ನೋಡಲಾಗಿದೆ. ಇನ್ನು 6 ಗುಂಟೆಯಷ್ಟು ಜಾಗದ ಅವಶ್ಯಕತೆ ಇದೆ. ಈ ಕುರಿತು ಮಾತುಕತೆ ನಡೆಸಲಾಗುತ್ತಿದೆ. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯವಿದೆ. ಸಭಾಭವನ ನಿರ್ವಣಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂಗಳನ್ನು ದೇಣಿಗೆ ನೀಡಲು ತೀರ್ವನಿಸಿದ್ದೇನೆ ಎಂದರು.
ರವಿ ಹೆಗಡೆ ಹೂವಿನಮನೆ ಮಾತನಾಡಿ, ಸಭಾಭವನಕ್ಕೆ 10 ಲಕ್ಷ ರೂ. ಗಳನ್ನು ನೀಡುತ್ತೇನೆ ಎಂದು ತಿಳಿಸಿದರು.
ಉದ್ಯಮಿ ಪ್ರಕಾಶ ಹೆಗಡೆ ಮಾತನಾಡಿ ತಾಲೂಕಿನ ಅಡಕೆ ಬೆಳಗಾರರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂದಾಯವಾಗುತ್ತಿದೆ. ಆದರೆ ಹವ್ಯಕರಿಗೆ ಸರ್ಕಾರದಿಂದ ಸರಿಯಾಗಿ ಪರಿಹಾರ ಹಾಗೂ ಅಗತ್ಯ ಸಹಾಯ ಸಿಗುತ್ತಿಲ್ಲ. ಸಭಾಭವನ ನಿರ್ವಣಕ್ಕೆ ಸಹಾಯ ನೀಡುವಂತೆ ಸರ್ಕಾರವನ್ನು ಆಗ್ರಹಿಸಬೇಕು ಎಂದು ಹೇಳಿ ಸಭಾಭನವನ ನಿರ್ವಣಕ್ಕೆ 1ಲಕ್ಷದ 11ಸಾವಿರದ 115 ರೂ. ನೀಡುತ್ತೇನೆ ಎಂದು ತಿಳಿಸಿದರು.
ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ, ಪ್ರಮುಖರಾದ ಕೆ.ಎನ್.ಶ್ರೀಧರ, ಕೃಷ್ಣಮೂರ್ತಿ ಭಟ್ಟ ಸಾರಂಗ, ಅಶೋಕ ಹೆಗಡೆ, ಎ. ಪಿ. ಭಟ್ಟ ಮುತ್ತಿಗೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಎಂ.ಜಿ. ರಾಮಚಂದ್ರ, ಪತ್ರಕರ್ತ ನಾಗರಾಜ ಮತ್ತಿಗಾರ ಇತರರಿದ್ದರು. ಜಿ.ಜಿ. ಹೆಗಡೆ ಬಾಳಗೋಡ, ಗಣೇಶ ಭಟ್ಟ ಕಾಜಿನಮನೆ ಕಾರ್ಯಕ್ರಮ ನಿರ್ವಹಿಸಿದರು.
ಹವ್ಯಕರನ್ನು ಅಪಹಾಸ್ಯ ಮಾಡುತ್ತಿರುವುದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾವು ನಮ್ಮ ಕೆಲಸ ಮಾಡುತ್ತ ಹೋಗಬೇಕು. ಹಿಂದೆ ಹವ್ಯಕರು ಗಟ್ಟಿಯಾಗಿದ್ದರು. ಈಗಲೂ ಗಟ್ಟಿ ಇದ್ದಾರೆ. ಹವ್ಯಕರ ಶಕ್ತಿ ಇಡೀ ಜಗತ್ತಿಗೆ ತಿಳಿದಿದೆ. ಆನೆ ಹಾಗೆ ನಮ್ಮ ನಡೆ ಇರಬೇಕು. ಮುಂದಿನ ಪೀಳಿಗೆ ಗಟ್ಟೆಯಾಗಬೇಕಾದರೆ ಸಭಾಭವನ ಅತ್ಯವಶ್ಯ. | ಡಾ.ಗಿರಿಧರ ಕಜೆ ಅಧ್ಯಕ್ಷರು ಅಖಿಲ ಹವ್ಯಕ ಮಹಾಸಭೆ