ಅಥಣಿ ಗ್ರಾಮೀಣ: ಪ್ರತಿವರ್ಷ ನೀರಾವರಿ ಪ್ರದೇಶ ಹಾಗೂ ಸವಳು-ಜವಳು ಸಮಸ್ಯೆಯ ತೀವ್ರತೆ ಹೆಚ್ಚುತ್ತಿರುವುದರಿಂದ ರೈತರಿಗೆ ಅನುಕೂಲವಾಗಲೆಂದು ನರೇಗಾ ಯೋಜನೆಯಡಿ ಸವಳು-ಜವಳು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ ಸಲಹೆ ನೀಡಿದರು.
ಅಥಣಿ ತಾಲೂಕಿನ ಹುಲಗಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಸವಳು-ಜವಳು ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನ ಹಲವು ಗ್ರಾಮಗಳಲ್ಲಿ ಸಾವಿರಾರು ಎಕರೆ ಭೂ ಪ್ರದೇಶ ಸವಳು-ಜವಳಿಗೆ ತುತ್ತಾಗಿದೆ.
ಇದನ್ನು ಹೋಗಲಾಡಿಸಲು ಸರ್ಕಾರ ನರೇಗಾ ಯೋಜನೆಯಡಿ ಮೊದಲ ಹಂತದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರಲ್ಲಿ ಅಥಣಿ ತಾಲೂಕಿನ ಹುಲಗಬಾಳ, ಶೇಗುಣಸಿ, ಸತ್ತಿ, ಸಪ್ತಸಾಗರ ಹಾಗೂ ಕಾಗವಾಡ ತಾಲೂಕಿನ ಮೋಳೆ ಗ್ರಾಮಗಳನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯಿತಿ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ.
ಸಂಬಂಧಿಸಿದ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವಂತೆ ಹಾಗೂ ಜಿಯೋಟ್ಯಾಗ್ ಕಾಮಗಾರಿಯ ಭಾವಚಿತ್ರ ದಾಖಲಾತಿಗಳ ಅಪ್‌ಡೆಟ್ ಮಾಡಿಕೊಳ್ಳುವಂತೆ ಸೂಚಿಸಿದರು. ತಾಪಂ ಅಧಿಕಾರಿಗಳಾದ ಮೈಬೂಬ್ ಖೋತ್ವಾಲ್, ಗುರು ಸೋಮಣ್ಣವರ, ಪಿಡಿಒ ರೇಖಾ ಸೋಮಣ್ಣವರ, ಲಾನುಭವಿಗಳಾದ ಅಣ್ಣಪ್ಪ ದೊಯಿಪುಡೆ, ರಮೇಶ ಪಾಟೀಲ, ರಾಮದಾಸ ಬಂಬಿರೆ, ಬಸಗೌಡ ಪಾಟೀಲ ಇತರರಿದ್ದರು.