ಜಿಲ್ಲೆ

ಬಯಲಾಟದ ಮೂಲಕ ಪೂರ್ವಜರ ಸೊಗಡು ಉಳಿಯಲಿ

ಚನ್ನರಾಯಪಟ್ಟಣ: ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಹಮ್ಮಿಕೊಂಡಿರುವ ಸ್ಥಳೀಯ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಕ್ರಿಯಾಶೀಲ ಚಟುವಟಿಕೆಗಳಿಂದ ನಮ್ಮ ಪೂರ್ವಜರ ಸಂಸ್ಕೃತಿಯ ಸೊಗಡು ಉಳಿಯುವಂತಾಗಲಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಪಟ್ಟಣದ ಅನಿಕೇತನ ಕಿರುರಂಗ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೂಡಲಪಾಯ ಬಯಲಾಟ ಸಂಭ್ರಮ ಕಾರ್ಯಕ್ರಮದಲ್ಲಿ ಬಯಲುನಾಟಕ ಪ್ರದರ್ಶನ, ಸಂವಾದ, ಹಾಡುಗಾರಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದ್ದು, ಇಲ್ಲಿ ಸಾವಿರಾರು ಜನಪದ ಕಲೆಗಳು ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಸಾಗುತ್ತಾ ಬಂದಿವೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಇದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯಿಂದ ಬಯಲಾಟ ಸಂಭ್ರಮ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕಲೆಗೆ ಜನಪದ ಕಲೆಯೇ ತಾಯಿ ಬೇರಾಗಿದೆ. ಜನಪದ ಕಲೆಯನ್ನು ಮರೆತರೆ ಬೇರೆ ಯಾವ ಕಲೆಯೂ ಪರಿಪೂರ್ಣವಾಗಲಾರದು. ಕರಾವಳಿ ಭಾಗದಲ್ಲಿ ಯಕ್ಷಗಾನ ಬೆಳೆದಷ್ಟು ಬಯಲಾಟಗಳು ಬೆಳೆದಿಲ್ಲ. ಪ್ರಸ್ತುತ ದಿನಗಳಲ್ಲಿ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಿ, ಜಾನಪದ ಕಲೆಗಳ ತರಬೇತಿ ನೀಡುವುದು ಅವಶ್ಯವಾಗಿದೆ. ಇಂದಿನ ಸಂದರ್ಭದಲ್ಲಿ ಮೂಡಲಪಾಯ ಬಯಲಾಟ ಸಂಭ್ರಮ ಶಿಬಿರವನ್ನು ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ಮತ್ತು ಜಾಗತೀಕರಣದ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಮನುಷ್ಯನ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿ ಜಾನಪದ ಕಲೆಯಲ್ಲಿ ಅಡಗಿದೆ. ಆಧುನಿಕತೆಯ ಭರಾಟೆಗೆ ಸಿಲುಕಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ನಶಿಸಿ ಹೋಗುತ್ತಿರುವ ಇಂಥ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ್ ಮಾತನಾಡಿ, ಬಯಲಾಟದ ಕಲೆಗಳು ಯಕ್ಷಗಾನದಂತೆಯೇ ವಿಶ್ವವಿಖ್ಯಾತಗೊಳ್ಳಲು ಪಠ್ಯ, ನೃತ್ಯ, ಹಾಡುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತಂದು ಶಿಸ್ತುಬದ್ಧವಾಗಿ ಪ್ರದರ್ಶನಗೊಂಡರೆ ತನ್ನ ಗತವೈಭವವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಬಯಲಾಟ ಅಕಾಡೆಮಿ ಸದಸ್ಯ ಬಿ.ಪರಶುರಾಮ್ ಹರಪನಹಳ್ಳಿ ಅವರಿಂದ ಮೂಡಲಪಾಯ ಅಂದು-ಇಂದು ವಿಷಯ ಕುರಿತು ಸಂವಾದ ಗೋಷ್ಟಿ ನಡೆಯಿತು. ಇ.ನಾಗಣ್ಣ ಮತ್ತು ಸಂಗಡಿಗರಿಂದ ಭೀಮಾರ್ಜುನರ ಕಾಳಗ ಪ್ರಸಂಗ ಕುರಿತು ಮೂಡಲಪಾಯ ಪ್ರದರ್ಶನ ನಡೆಯಿತು. ಅಂತಾರಾಷ್ಟ್ರೀಯ ಕಲಾವಿದ ಗುಂಡೂರಾಜ್ ಹೂವಿನಹಳ್ಳಿಕಾವಲು ತಂಡದವರಿಂದ ಕರಿಬಂಟನ ಕಾಳಗ ಪ್ರಸಂಗ ಕುರಿತು ಗೊಂಬೆ ಆಟ ನಡೆಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಬಿ ಪಾಲಾಕ್ಷಯ್ಯ, ಸದಸ್ಯ ಸಂಚಾಲಕ ಡಾ.ಚಂದ್ರು ಕಾಳೇನಹಳ್ಳಿ, ಗೋವಿಂದೇಗೌಡ, ನಾರಾಯಣ್ ಕಾಳೇನಹಳ್ಳಿ, ಕೆ.ಬಿ.ಮಂಜಪ್ಪ, ನಿಂಬೇಹಳ್ಳಿ ಚಂದ್ರು, ಎಚ್.ಎಸ್.ಗಿರಿರಾಜ್, ಬಿ.ಡಿ.ಶಂಕರೇಗೌಡ, ಕಾಂತರಾಜು, ಶಿವನಗೌಡ ಪಾಟೀಲ್, ಮೋಹನ್ ಮಟ್ಟನವಿಲೆ, ಗೋವಿಂದರಾಜು ದಿಂಡಗೂರು, ಕೆ.ಎನ್.ಪಾರ್ಥ, ಉಮೇಶ್ ತೆಂಕನಹಳ್ಳಿ, ನಂಜಂಡಮೈಮ್, ಶಿವಶಂಕರಪ್ಪ, ಕೃಷ್ಣಯ್ಯ, ಬರಾಳು ಶಿವರಾಂ, ಎಚ್.ಡಿ.ವೆಂಕಟೇಶ್ ಪ್ರಸಾದ್, ರಂಗಸ್ವಾಮಿ, ಆರ್. ಬಿ.ಪುಟ್ಟೇಗೌಡ, ಎನ್.ಎಸ್.ಗುಣಶಂಕರ್, ಎಚ್.ಆರ್.ನಿಂಗೇಗೌಡ, ಆರ್.ಕೆ.ಪುಟ್ಟಸ್ವಾಮಿಗೌಡ, ರಾಘವೇಂದ್ರ ಪಟೇಲ್, ರಾಣಿ ಚರಾಶ್ರೀ, ಸಾವಿತ್ರಮ್ಮ ಇತರರು ಇದ್ದರು.