ಜಿಲ್ಲೆ

ಸ್ವಾತಂತ್ರ್ಯ ಹೋರಾಟದ ಕಿಚ್ಚು ಸದಾ ಶಾಶ್ವತವಾಗಿರಲಿ

ಬಸವರಾಜ ವೀರಪ್ಪ ಗರಗ

ಹಾನಗಲ್ಲ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರತಿ ಗ್ರಾಮ, ಜನಾಂಗದ ಪ್ರತಿರೋಧದಿಂದ ಬ್ರಿಟಿಷರನ್ನು ಬಗ್ಗು ಬಡಿಯುವ ದಿಟ್ಟತನ ತೋರಿದ್ದರ ಪರಿಣಾಮ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಈಗ ಅದು ನೆನಪು ಮಾತ್ರ ಆಗದೆ ಅದರ ಅರಿವು ಶಾಶ್ವತವಾಗಿರಬೇಕು ಎಂದು ಹುತಾತ್ಮ ಮೈಲಾರ ಮಹಾದೇವ ಟ್ರಸ್ಟ್ ಅಧ್ಯಕ್ಷ ವಿ.ಎನ್. ತಿಪ್ಪನಗೌಡರ ಹೇಳಿದರು. ಕರ್ನಾಟಕ ಸುವರ್ಣ ಸಂಭ್ರಮ-50ರ ಅಂಗವಾಗಿ ರಂಗ ಪಯಣ-24 ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲಗಲಿ ಬೇಡರ ವೀರಗಾಥೆಯ ಹತಾರ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆಯ ಸಂಕಲ್ಪ ದೊಂದಿಗೆ ಮುನ್ನಡೆಯುತ್ತಿರುವ ಭಾರತ ಸ್ವಾತಂತ್ರ್ಯ ಹೋರಾಟದ ಕೆಚ್ಚು, ಕಿಚ್ಚು, ಇಚ್ಛಾಶಕ್ತಿಯನ್ನು ಸ್ಮೃತಿ ಪಟಲದಿಂದ ದೂರ ಸರಿಸಲು ಸಾಧ್ಯವಿಲ್ಲ ಎಂದರು. ಕವಯಿತ್ರಿ ದೀಪಾ ಗೋನಾಳ ಮಾತನಾಡಿ, ಸಾಮಾಜಿಕ ನೆಲೆಯಲ್ಲಿ ನಾಟಕಕ್ಕೆ ಪ್ರಮುಖ ಸ್ಥಾನವಿದೆ. ಇದು ಕೇವಲ ಮನೋರಂಜನೆಯಲ್ಲ. ಮಾನವೀಯ ಮೌಲ್ಯಗಳನ್ನು, ರಾಷ್ಟ್ರೀಯ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಿದೆ. ಮಹಾಕಾವ್ಯಗಳನ್ನು ರಂಗ ಕಲೆಯ ಮೂಲಕ ಸಮಾಜಕ್ಕೆ ನೀಡಿದ ಹಿರಿಮೆಯನ್ನು ಮರೆಯಲಾಗದು. ಕಲಾವಿದರ ಬದುಕು ಬೆಳಗಬೇಕು. ರಂಗಭೂಮಿ ಮತ್ತೆ ಜನ ಮಾನಸದಲ್ಲಿ ನಿತ್ಯದ ಮನೆ ಮಾತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಲಾವಿದ ಬಿ.ಆರ್. ಪಾಟೀಲ ಮಾತನಾಡಿ, ಕಲಾವಿದರನ್ನು ಬೆನ್ನು ತಟ್ಟಿ ಬೆಳೆಸುವವರು ಬೇಕಾಗಿದ್ದಾರೆ. ಕಲೆ ಎಲ್ಲರಲ್ಲೂ ಇದೆ. ಅದಕ್ಕೆ ಮಾರ್ಗದರ್ಶನ ಬೇಕು ಎಂದರು.ಸಾಹಿತಿ ಸತೀಶ ಕುಲಕರ್ಣಿ, ಕಲಾವಿದ ಪ್ರಭು ಗುರಪ್ಪನವರ, ಪ್ರೊ. ಎಸ್.ಎನ್. ತಿಪ್ಪನಗೌಡರ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಬಿ.ವಿ. ಬಿರಾದಾರ, ಅಪ್ಪುಶೆಟ್ಟರ, ಎಸ್.ವಿ. ಹೊಸಮನಿ, ವಿ.ಎಸ್. ಚಿಕ್ಕಣ್ಣನವರ, ಜಿ.ಎಸ್. ಮುಚ್ಚಂಡಿ, ಜಿ.ಬಿ. ಕೋಟಿ, ಮಾರುತಿ ಈಳಿಗೇರ, ಇತರರಿದ್ದರು.