ಆನಂದಪುರದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವದಲ್ಲಿ ಶ್ರೀ ರೇಣುಕಾನಂದ ಸ್ವಾಮೀಜಿ, ಬಂಗಾರಪ್ಪ ಗೌತಮಪುರ, ಕೆ.ಎಸ್.ಪ್ರಶಾಂತ ಇತರರಿದ್ದರು. 
ಜಿಲ್ಲೆ

ಗೌರವಯುತ ಬದುಕು ನಮ್ಮದಾಗಲಿ: ರೇಣುಕಾನಂದ ಶ್ರೀ

ಆನಂದಪುರ: ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಕುಲ ಎಂಬ ತತ್ವ ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಭಾವನೆ ಮೂಡಿಸಿ, ಸಮಾಜದ ಪ್ರಗತಿಗೆ ನಿರಂತರ ಕಾರ್ಯ ನಡೆಯಬೇಕು ಎಂದು ನಿಟ್ಟೂರಿನ ಶ್ರೀ ರೇಣುಕಾನಂದ ಸ್ವಾಮೀಜಿ ತಿಳಿಸಿದರು.

ನಾರಾಯಣಗುರು ಈಡಿಗರ ಸಂಘವು ಇಲ್ಲಿನ ಬಸವನ ಬೀದಿಯ ಶ್ರೀ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಮಾಜದ ಜನರಲ್ಲಿ ಬಡವ, ಬಲ್ಲಿದ ಬೇಧ ಇರದಂತೆ ಐಕ್ಯತಾ ಭಾವ ಮೂಡಿಸಬೇಕು. ಸಮಾಜದಲ್ಲಿ ಗೌರವಯುತ ಬದುಕು ನಮ್ಮದಾಗಬೇಕಾಗಿದ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿ ರಾಮಪ್ಪ ಮಾತನಾಡಿ, ನಾರಾಯಣ ಗುರುಗಳು ತಮ್ಮ ಬದುಕು ಮತ್ತು ತತ್ವಗಳಿಂದ ಬ್ರಹ್ಮಶ್ರೀ ಬಿರುದು ಪಡೆದಿದ್ದರು. ಸಂಘರ್ಷದ ಸಮಯದಲ್ಲೂ ಸಾಮರಸ್ಯದ ಸಮಾಜ ನಿರ್ಮಿಸಿದ ಶ್ರೇಯಸ್ಸು ಅವರದ್ದು. ಅವರ ಆದರ್ಶ ನಮಗೆ ಹೊಸ ಸ್ಪೂರ್ತಿ ಮೂಡಿಸಲು ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಭೂಮಿ ಒಡೆತನ ಮತ್ತು ಸಾರ್ವತ್ರಿಕ ಶಿಕ್ಷಣದಿಂದ ಈಡಿಗ ಜನಾಂಗದವರು ಇಂದು ಗೌರವಯುತ ಬದುಕು ನಡೆಸುವಂತಾಗಿದೆ. ಇನ್ನಷ್ಟು ಸವಲತ್ತುಗಳು ಪಡೆಯಲು ಸಂಘಟನೆ ಮುಖ್ಯ ಎಂದು ಹೇಳಿದರು.
ಯಡೇಹಳ್ಳಿ ವೃತ್ತದಿಂದ ಶ್ರೀಸೀತಾರಾಮ ಕಲ್ಯಾಣ ಮಂಟಪದವರೆಗೆ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.
ಈಡಿಗ ಸಂಘದ ಅಧ್ಯಕ್ಷ ಬಂಗಾರಪ್ಪ ಗೌತಮಪುರ, ಸಮಾಜ ಸೇವಕಿ ಡಾ.ರಾಜನಂದಿನಿ ಕಾಗೋಡು, ನವ ಚೇತನ ವೇದಿಕೆ ಅಧ್ಯಕ್ಷ ಕೆ.ಎಸ್.ಪ್ರಶಾಂತ, ಪ್ರಮುಖರಾದ ಅಶೋಕ ನರಸೀಪುರ, ಚೇತನರಾಜ್ ಕಣ್ಣೂರು, ರೇಣುಕಾ, ಪ್ರಭಾವತಿ, ಶರತ್ ನಾಗಪ್ಪ, ರಮಾನಂದ ಸಾಗರ್, ದೇವು ಬೀಸನಗದ್ದೆ, ಪ್ರವೀಣ್, ಚೌಡಪ್ಪ ವರದಾಮೂಲ ಇತರರಿದ್ದರು.