ಜಿಲ್ಲೆ

ಸಕಾರವಾಗಲಿ ಜಿಲ್ಲೆಯ ಆಶೋತ್ತರಗಳು

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಹಳೆಯ ವರ್ಷ 2023ಕ್ಕೆ ವಿದಾಯ ಹೇಳಿ, ನೂತನ ವರ್ಷ 2024ಕ್ಕೆ ಕಾಲಿಟ್ಟಿರುವ ಸುಸಂದರ್ಭದಲ್ಲಿ ಜಿಲ್ಲೆಯ ಜನರಲ್ಲಿ ಹೊಸ ಅಭಿಲಾಷೆಗಳು ಚಿಗುರೊಡೆದಿವೆ.

ಕಳೆದುಹೋದ ಹಿಂದಿನ ವರ್ಷ ಕಲಿಸಿದ ಪಾಠದ ಮೇಲೆ ಹೊಸ ವರ್ಷದಲ್ಲಿ ಭರವಸೆಯ ಸೌಧವನ್ನು ಕಟ್ಟಬೇಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅಲ್ಪಾವಧಿ, ದೀರ್ಫಾವಧಿಯ ಕ್ರಿಯಾಯೋಜನೆ ರೂಪಿಸಬೇಕು. ಅದರ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರು ಚಾಲನೆ ನೀಡಿ ಸಾಕಾರಗೊಳಿಸಬೇಕು. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇಂತಹವೊಂದು ನಿರೀಕ್ಷೆಯನ್ನು ಜಿಲ್ಲೆಯ ಜನರು ಇಟ್ಟುಕೊಂಡಿದ್ದಾರೆ.

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ವಹಿಸಿ


ಅರಮನೆ, ಚಾಮುಂಡಿಬೆಟ್ಟ, ಮೃಗಾಲಯವಷ್ಟೇ ಅಲ್ಲ, ಜಿಲ್ಲೆಯಲ್ಲಿ 24ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಅವುಗಳನ್ನು ಜಗತ್ತಿಗೆ ತೋರಿಸಬೇಕು. ದಸರಾ ಹಾಗೂ ಅರಮನೆ ಮಾತ್ರ ಪ್ರವಾಸೋದ್ಯಮದ ಕೇಂದ್ರಬಿಂದುವಲ್ಲ. ತಲಕಾಡು, ಸೋಮನಾಥಪುರ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳ ಕಡೆಗೆ ಪ್ರವಾಸಿಗರನ್ನು ಸೆಳೆಯಬೇಕು. ಕಾಡಂಚಿನ ಕಬಿನಿ ಹಿನ್ನೀರು ಪ್ರದೇಶದ ವನ್ಯಜೀವಿ, ಅರಣ್ಯ ಪ್ರವಾಸ ಅಭಿವೃದ್ಧಿ, ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಇನ್ನಷ್ಟು ಚೈತನ್ಯ ತುಂಬಬೇಕು. ಪುಣ್ಯಕ್ಷೇತ್ರ ತಲಕಾಡು ಪ್ರದೇಶವನ್ನು ಯಾತ್ರಾಸ್ಥಳವಾಗಿ ಪರಿವರ್ತನೆ ಮಾಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸೋದ್ಯಮವನ್ನು ಪ್ರವಾಸಿ ಸ್ನೇಹಿಯಾಗಿ ರೂಪಿಸಬೇಕಿದೆ. ಬ್ರಾೃಂಡ್ ಮೈಸೂರು ಪರಿಕಲ್ಪನೆಗೆ ಒತ್ತು ಕೊಡಬೇಕು. ಜಾಗತಿಕ ಮಟ್ಟದಲ್ಲಿ ಮೈಸೂರು ಪ್ರವಾಸೋದ್ಯಮ ಕುರಿತು ಪ್ರಚಾರ ಮಾಡಬೇಕು. ಸಂಜೆ ಹೊತ್ತಿನಲ್ಲಿ ಪ್ರವಾಸಿಗರನ್ನು ಹಿಡಿದಿಡಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು.

ಜಾಗತಿಕ ಮಟ್ಟದಲ್ಲಿ ಪ್ರವಾಸಿ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಮೈಸೂರಿನಲ್ಲಿ ಪ್ರವಾಸಿ ವೃತ್ತವನ್ನು ಸ್ಥಾಪನೆ ಮಾಡಬೇಕು. ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು-ಹಳೇಬೀಡು ಸೇರಿ ಪ್ರವಾಸಿ ವೃತ್ತವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಬೇಕು.

ಮೈಸೂರಿನ ಅಸ್ಮಿತೆಯಾದ ನಾಡಹಬ್ಬ ದಸರಾ ಮಹೋತ್ಸವವನ್ನು ಜಾಗತಿಕ ಮಟ್ಟದಲ್ಲಿ ಬ್ರಾೃಂಡ್ ಆಗಿ ರೂಪಿಸಬೇಕು. ಸೂಕ್ತ ತಯಾರಿ ಮಾಡಿಕೊಂಡು ದಸರಾವನ್ನು ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಬೇಕು.

ಚಾಮುಂಡೇಶ್ವರಿ ಪ್ರಾಧಿಕಾರ ರಚಿಸಿ:

ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ‘ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ’ ರಚನೆ ಬೇಡಿಕೆ ಇನ್ನೂ ಈಡೇರಿಲ್ಲ. ಈ ಕುರಿತು ತಕ್ಷಣ ಕ್ರಮ ವಹಿಸಬೇಕು. ಇದರಿಂದ ನಾಡದೇವಿ ಚಾಮುಂಡೇಶ್ವರಿ ದೇವಾಲಯ ಹಾಗೂ ಚಾಮುಂಡಿಬೆಟ್ಟದ ಸಮಗ್ರ ಪ್ರಗತಿಗೆ ಅನುಕೂಲವಾಗಲಿದೆ. ಇದು ಪರಿಸರ ಸ್ನೇಹಿಯಾಗಿರಬೇಕು. ಅಲ್ಲಿನ ನಿಸರ್ಗ ಸೌಂದರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಯೂ ಇದೆ.

ರೋಪ್ ವೇ ಕೈಬಿಡಿ:


ಪರಿಸರವಾದಿಗಳು, ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಜಾರಿಗೆ ಉದ್ದೇಶಿಸಿರುವ ರೋಪ್ ವೇ ಯೋಜನೆ ಕೈಬಿಡಬೇಕು. ಧಾರ್ಮಿಕ, ಪ್ರಾಕೃತಿಕ ತಾಣವಾಗಿಯೇ ಬೆಟ್ಟವನ್ನು ಉಳಿಸಿಕೊಂಡು ಹೋಗಬೇಕು. ಕುಸಿದು ಬಿದ್ದಿರುವ ತಡೆಗೋಡೆ ನಿರ್ಮಾಣ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.

‘ವಸ್ತುಪ್ರದರ್ಶನ’ಕ್ಕೆ ಜೀವತುಂಬಿ:


ನಗರದ ಹೃದಯ ಭಾಗದಲ್ಲಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಉದ್ದೇಶವೂ ಇನ್ನೂ ಸಾಕಾರಗೊಂಡಿಲ್ಲ. ಇದು ಸಹ ಕಾರ್ಯರೂಪಕ್ಕೆ ಬರಬೇಕು. ಹೀಗಾದರೆ, ದಸರಾ ವಸ್ತುಪ್ರದರ್ಶನದಿಂದ ಕೇವಲ 3 ತಿಂಗಳ ಕಾಲ ಚಟುವಟಿಕೆಗಳಿಂದ ಕೂಡಿರುವ ಇದು ವರ್ಷವಿಡೀ ಕಳೆಗಟ್ಟಲಿದೆ.

ಫಿಲ್ಮ್ ಸಿಟಿ ಸಾಕಾರಾಗೊಳ್ಳಲಿ:


ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಿನಿನಗರಿ ಯೋಜನೆಯನ್ನು ತ್ವರಿತವಾಗಿ ಕಾರ್ಯಗರ್ತಗೊಳಿಸಬೇಕು. ಚಿತ್ರೀಕರಣ ಸೇರಿ ಇನ್ನಿತರ ಸಿನಿಮಾ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತ ಅವಕಾಶ, ಸೌಲಭ್ಯ ಕಲ್ಪಿಸಿಕೊಡಬೇಕು. ಇದರಿಂದ ಪ್ರವಾಸೋದ್ಯಮದ ಆರ್ಥಿಕ ಚಟುವಟಿಕೆ ವೃದ್ಧಿಯಾಗಲಿದೆ.

ಕಲಾ ಗ್ಯಾಲರಿಗೆ ಮೂರ್ತರೂಪ ಸಿಗಲಿ:


ಅಂತಾರಾಷ್ಟ್ರೀಯ ಗುಣಮಟ್ಟದ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿನ ಎರಡೂವರೆ ಎಕರೆ ಜಮೀನಿನಲ್ಲಿ ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದೊಂದಿಗೆ ಕಲಾಗ್ಯಾಲರಿಗೆ ಮೂರ್ತರೂಪ ನೀಡಬೇಕಿದೆ.

ವೇಲೋಡ್ರೋಮ್ ಸ್ಥಾಪಿಸಿ:


ಸೈಕ್ಲಿಂಗ್‌ಗೆ ಉತ್ತೇಜನ ನೀಡಬೇಕಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವುಳ್ಳ ರಾಜ್ಯದ ಕ್ರೀಡಾಪಟುಗಳನ್ನು ತಯಾರಿಸಲು ಮೈಸೂರಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆ ಮಾಡಬೇಕು. ಕ್ರೀಡೆಗೆ ಇನ್ನಷ್ಟು ಸೌಲಭ್ಯ ಕಲ್ಪಿಸಿಕೊಡಬೇಕು.

ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸಿ:


ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ದೊಡ್ಡ ಉಡುಗೊರೆ ನೀಡಬೇಕು. ಅದರ ಅಧೀನದ ಕೆ.ಆರ್.ಆಸ್ಪತ್ರೆ, ಚಲುವಾಂಬ ಸೇರಿದಂತೆ ಇನ್ನಿತರ ಆಸ್ಪತ್ರೆಗಳನ್ನು ಉನ್ನತೀಕರಣಗೊಳಿಸಬೇಕು. ಹೊರರೋಗಿಗಳ ವಿಭಾಗವನ್ನು ಒಂದೇ ಸೂರಿನಡಿ ತರಲು ಒಪಿಡಿ ಕಟ್ಟಡ ನಿರ್ಮಿಸಬೇಕು. ಟ್ರಾಮಾ ಕೇರ್ ಸೆಂಟರ್‌ಗಳ ಕಾರ್ಯಾಚರಣೆಗೆ 30 ಕೋಟಿ ರೂ. ನೀಡಲಾಗಿದೆ. ಸರ್ಕಾರಿ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ಸೌಲಭ್ಯ ಕಲ್ಪಿಸಬೇಕು.


ಜತೆಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ವತಿಯಿಂದ ಅತ್ಯಾಧುನಿಕ ಕೌಶಲ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯ ಸ್ಥಾಪನೆ, ಜಿಲ್ಲೆಗಳಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು.


ಜಿಐ ಟ್ಯಾಗ್‌ಗೆ ಉತ್ತೇಜನ ಕೊಡಿ:


ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗೆ ಪ್ರೋತ್ಸಾಹ ನೀಡಬೇಕು. ಭಾರತದಲ್ಲಿನ ಭೌಗೋಳಿಕ ಸೂಚನೆಗಳ ಪಟ್ಟಿಯಲ್ಲಿ(ಜಿಐ ಟ್ಯಾಗ್) ಇರುವ ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್‌ಗಾಗಿ ನೂತನ ಕಾರ್ಯಕ್ರಮ ರೂಪಿಸಬೇಕು. ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಮೈಸೂರು ಭಾಗದ ಬಿತ್ತನೆ ಪ್ರದೇಶದಲ್ಲಿ ಮೂಲಸೌಕರ್ಯ ಬಲಪಡಿಸಬೇಕು.


ಪಾರಂಪರಿಕ ಕಟ್ಟಡಗಳ ಸಂರಕ್ಷಿಸಿ:


ನಗರದ ಅಸ್ಮಿತೆಯಾಗಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು. 350 ಪಾರಂಪರಿಕ ಕಟ್ಟಡಗಳ ಜೀರ್ಣೋದ್ಧಾರ ಮಾಡಬೇಕು. ಅದಕ್ಕಾಗಿ ಅಂದಾಜು 100 ಕೋಟಿ ರೂ. ಅನುದಾನ ನೀಡಬೇಕು. ಪಾರಂಪರಿಕ ಕುರುಹುಗಳಾದ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳ ನೆಲಸಮ ಮಾಡುವುದನ್ನು ಕೈಬಿಡಬೇಕು. ಬದಲಿಗೆ ಅವುಗಳನ್ನು ಸಂರಕ್ಷಣೆ ಮಾಡಬೇಕು.

ಮೈವಿವಿ ನೆರವಿಗೆ ಧಾವಿಸಲಿ:


ಉಪನ್ಯಾಸಕರ ಕೊರತೆಯಿಂದ ಮೈಸೂರು ವಿಶ್ವವಿದ್ಯಾಲಯ ನಲುಗಿ ಹೋಗಿದೆ. ಮಂಜೂರಾದ 604 ಬೋಧಕ ಹುದ್ದೆಗಳಲ್ಲಿ 440 ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಸರ್ಕಾರ ಅನುಮತಿ ನೀಡಬೇಕು. ಹೊಸ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಮೈಸೂರು ವಿವಿ ಜಿಲ್ಲೆಗಷ್ಟೇ ಸೀಮಿತವಾಗಿದ್ದು, ಆರ್ಥಿಕ ಸಂಪನ್ಮೂಲವೂ ಕಡಿಮೆಯಾಗಿದೆ. ಇದರಿಂದ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಇದರ ನೆರವಿಗೆ ಸರ್ಕಾರ ಧಾವಿಸಬೇಕು.

ಅಂತೆಯೆ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಶಾಶ್ವತ ಸೂರು ಕಲ್ಪಿಸಬೇಕು. ಕಾಯಂ ಬೋಧಕರು, ಸಿಬ್ಬಂದಿ ನೇಮಕಾತಿ, ಆಡಳಿತ ಕಚೇರಿ, ಕ್ಯಾಂಪಸ್ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸಿ ಇದನ್ನು ವಿಶ್ವವಿದ್ಯಾಲಯ ಸ್ವರೂಪದಲ್ಲಿ ಅಭಿವೃದ್ಧಿ ಮಾಡಬೇಕು.

  • ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಮಾಡಬೇಕು. ರಿಂಗ್‌ರೋಡ್ ಹೊರಭಾಗದಲ್ಲಿ ಎಗ್ಗಿಲ್ಲದೆ ಬೇಕಾಬಿಟ್ಟಿಯಾಗಿ ಬೆಳೆಯುತ್ತಿರುವ ಬಡಾವಣೆಗಳಿಗೆ ಕಡಿವಾಣ ಹಾಕಿ, ವ್ಯವಸ್ಥಿತವಾಗಿ ನಗರ ಬೆಳವಣಿಗೆಗೆ ಬುನಾದಿ ಹಾಕಬೇಕು.
  • ಮೈಸೂರಿನ ಹೊರಭಾಗದಲ್ಲಿ ಹೊರ ಪರಿಧಿಯ ರಸ್ತೆಯನ್ನು(ಪೆರಿಫೆರಲ್ ರಿಂಗ್ ರೋಡ್) ತ್ವರಿತಗತಿಯಲ್ಲಿ ಸಾಕಾರಗೊಳಿಸಬೇಕು.
  • ಮುಡಾ ಉದ್ದೇಶಿರುವ ಗುಂಪು ಮನೆ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿ ತ್ವರಿತವಾಗಿ ಕಾರ್ಯಗತಗೊಳಿಸಬೇಕು.
  • ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಸಂರಕ್ಷಣೆ ಮಾಡಿ ವಸ್ತುಸಂಗ್ರಹಾಲಯವಾಗಿ ರೂಪಿಸಬೇಕು.
  • ನನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಜನರ ಬಳಕೆಗೆ ಮುಕ್ತಗೊಳಿಸಬೇಕು.
  • ಕಬಿನಿ ಜಲಾಶಯದ ಬಳಿ ಕೆಆರ್‌ಎಸ್ ಬೃಂದಾವನ ಮಾದರಿ ಉದ್ಯಾನ ಅಭಿವೃದ್ಧಿ ಮಾಡಬೇಕು.
  • ರಾಷ್ಟ್ರಕವಿ ಕುವೆಂಪು ಮನೆಯನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಬೇಕು.
  • ಸಂಜೆ ಪಾಲಿಟೆಕ್ನಿಕ್ ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು.
  • ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್‌ವೇ ವಿಸ್ತರಣೆ ಮಾಡಬೇಕು.