ಲಕ್ಷ್ಮೇಶ್ವರ: ಸ್ವಾತಂತ್ರ್ಯ ಹೋರಾಟದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿ ಸಮರ್ಪಣಾಭಾವದಿಂದ ಹೋರಾಡಿದ ಈ ಭಾಗದ ಹೋರಾಟಗಾರರನ್ನು ಸ್ಮರಿಸುವ ಕಾರ್ಯವಾಗಬೇಕು ಎಂದು ಹಿರಿಯ ಸಾಹಿತಿ ಆರ್.ಎಂ. ಹೊನಕೇರಿ ಅಭಿಪ್ರಾಯಪಟ್ಟರು.
ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಹಮ್ಮಿಕೊಂಡಿದ್ದ ‘ಮಾಸದ ಮಾತು’ ಸರಣಿಯ ನಾಲ್ಕನೇ ಸಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಸಮರದ ಇತಿಹಾಸ ನಮ್ಮ ನೆಲದ ಹೋರಾಟಗಾರರು ತೆರೆಮರೆಗೆ ಸರಿದಿದ್ದಾರೆ. ಸ್ವಾತಂತ್ರ್ಯ ಸಮರದ ಅಮರ ಇತಿಹಾಸದಲ್ಲಿ ಶಿಗ್ಲಿ ಗ್ರಾಮದ 35ಕ್ಕೂ ಅಧಿಕ ಹೋರಾಟಗಾರರು ತನು,ಮನ,ಧನ ಸಮರ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿ ಬ್ರಿಟಿಷರ ನಿದ್ದೆಗೆಡಿಸಿದ್ದ ಈ ನೆಲೆದ ಹೋರಾಟಗಾರರು, ಮಹನೀಯರು ಸದಾ ಸ್ಮರಣೀಯರು ಎಂದರು.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು ಎಂಬ ವಿಚಾರ ಸಂಕಿರಣದ ವಿಷಯ ಕುರಿತು ಹಿರಿಯ ಸಾಹಿತಿ ಕೊತ್ತಲ ಮಹಾದೇವಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟವು ಅಂದು ಜನಪರ, ಜನಪದರ ಹೋರಾಟವಾಗಿತ್ತು. ಗ್ರಾಮೀಣರ ನಿತ್ಯ ಬದುಕಿನ ಜೊತೆಗೆ ಹೋರಾಟವೂ ಕೂಡ ಒಂದು ಭಾಗವಾಗಿತ್ತು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂತಹ ಹಲವಾರು ಹೋರಾಟದ ಹೆಜ್ಜೆ ಗುರುತುಗಳನ್ನು ನಾವು ಕಾಣಬಹುದಾಗಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ಶಿಗ್ಲಿ, ಸೂರಣಗಿ, ಬಾಲೆಹೊಸೂರು ಹಾಗೂ ಲಕ್ಷ್ಮೇಶ್ವರ ಭಾಗದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮಹಿಳೆಯರನ್ನೂ ಪ್ರೇರಣೆಗೊಳಪಡಿಸಿತ್ತು. ಆದರೆ, ಇತಿಹಾಸದಲ್ಲಿ ಅವುಗಳಿಗೆ ಹೆಚ್ಚು ಪ್ರಾಧಾನ್ಯತೆ ಸಿಕ್ಕಿಲ್ಲ ಎಂದರು. ಸಾಹಿತಿ ಎಸ್.ಬಿ. ಕೊಣ್ಣೂರ, ಕರಾವಿಪ ಜಿಲ್ಲಾಧ್ಯಕ್ಷ ಆರ್.ಎಫ್. ರಿತ್ತಿ, ಸಿ.ಜಿ. ಹಿರೇಮಠ, ಎಂ.ಕೆ. ಕಳ್ಳಿಮಠ, ನಾಗರಾಜ ಮಜ್ಜಿಗುಡ್ಡ, ಎಚ್.ಎಂ. ಗುತ್ತಲ, ನಾಗರಾಜ ಶಿಗ್ಲಿ, ಎಸ್.ವಿ. ಕನೋಜ, ಎನ್.ಎಸ್. ಗೊರವರ, ಗಂಗಾಧರ ಅರಳಿ, ವಿ.ಎಂ. ಹೂಗಾರ, ಮಂಜುನಾಥ ಗೊರವರ, ಷಣ್ಮುಖ ಕುಂಬಾರ, ಈರಣ್ಣ ಅಕ್ಕೂರ, ಮುರಳೀಧರ ಹುಬ್ಬಳ್ಳಿ, ಎನ್.ಆರ್. ಸಾತಪುತೆ, ವಿ.ವಿ. ಗೊಲ್ಲರ, ನಿಂಗಪ್ಪ ತಹಶೀಲ್ದಾರ, ನಿರ್ಮಲಾ ಅರಳಿ, ರತ್ನಾ ರ್ಕ ಇತರರಿದ್ದರು.
ನಂದಿನಿ ಮಾಳವಾಡ, ಪಂಚಮಿ ಅಂಬಿಗೇರ ದೇಶಭಕ್ತಿ ಗೀತೆ ಹಾಡಿದರು. ವೀಣಾ ಹತ್ತಿಕಾಳ, ಅಶ್ವಿನಿ ಅಂಕಲಕೋಟಿ, ಮಂಜುನಾಥ ಚಾಕಲಬ್ಬಿ ಹಾಗೂ ಎಸ್.ಬಿ. ಅಣ್ಣಿಗೇರಿ ನಿರ್ವಹಿಸಿದರು.