ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಸಿಪಿಐ ಅನೂಪ್ ಮಾದಪ್ಪ , ನಾಣಯ್ಯ, ದಮಯಂತಿ, ಬೆಳ್ಳಿಯಪ್ಪ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಲಿ

ರವಿಕುಮಾರ್ ಪಿ. ಕೆ

ವಿರಾಜಪೇಟೆ: ವಿದ್ಯಾರ್ಥಿ ಜೀವನವು ಅಮೂಲ್ಯವಾಗಿದ್ದು, ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ವಿರಾಜಪೇಟೆಯ ಆರಕ್ಷಕ ವೃತ್ತ ನೀರಿಕ್ಷಕ ಪೆಮ್ಮಚಂಡ ಅನೂಪ್ ಮಾದಪ್ಪ ಹೇಳಿದರು.

ವಿರಾಜಪೇಟೆ ಕಾವೇರಿ ಪಿ.ಯು. ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಮೊಬೈಲನ್ನು ಹಿತ ಮಿತವಾಗಿ ಬಳಸಬೇಕು. ಸಾಮಾಜಿಕ ಜಾಲತಾಣ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗದೆ ಉತ್ತಮ ಜೀವನವನ್ನು ನಡೆಸಬೇಕೆಂದು ಕಿವಿಮಾತು ಹೇಳಿದರು.

ಕಾವೇರಿ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಕುಪ್ಪಂಡ ಮೋತಿ ಬೆಳ್ಳಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಶಿಕ್ಷಕರು ಮತ್ತೂ ಪಾಲಕರಿಗೆ ಗೌರವವನ್ನು ಕೊಡುವುದರ ಮೂಲಕ ಮಾದರಿ ಪ್ರಜೆಗಳಾಗಬೇಕು ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ.ನಾಣಯ್ಯ ಅವರು 2024-25ನೇ ಸಾಲಿನ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಸಲ್ಡಾನಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಪಿ.ದಮಯಂತಿ, ಉಪನ್ಯಾಸಕರಾದ ಡಯಾನ ಸೋಮಯ್ಯ, ಅನುಪಮಾ ತಿಮ್ಮಯ್ಯ, ಕುಶಾಲಪ್ಪ, ತಮ್ಮಯ್ಯ, ಬೋಪಣ್ಣ, ಗಾಯತ್ರಿ, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.