ಭೇರ್ಯ ಗ್ರಾಮದಲ್ಲಿ ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀಧರ ನಾಯಕ್, ದೇವರಾಜ ಕಾಟೂರ್, ದೇವಪ್ಪನಾಯಕ, ಸಿ.ಸಿ.ಮಹದೇವ ಇತರರು ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಲಿ

ಲೋಕೇಶ್ ಮನು. ಡಿ

ಸಾಲಿಗ್ರಾಮ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಅಧಿಕಾರಿಗಳಾಗಿ ತಂದೆ-ತಾಯಿ ಮತ್ತು ಗುರುಗಳ ಋಣ ತಿಳಿಸುವ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಶ್ರೀಧರ ನಾಯಕ್ ಕಿವಿಮಾತು ಆಶಯ ವ್ಯಕ್ತಪಡಿಸಿದರು.

ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದಿಂದ ಭೇರ್ಯ ಗ್ರಾಮದಲ್ಲಿ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಹಾಗೂ ಸಂಘದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘದಿಂದ ಮಾಡುತ್ತಿರುವ ಕಾರ್ಯಕ್ರಮಗಳು ಉತ್ತಮವಾಗಿದ್ದು, ಕಟ್ಟ ಕಡೆಯ ವ್ಯಕ್ತಿ ಮತ್ತು ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಸಹಕಾರಿಯಾಗಿವೆ. ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಭಾಗದಲ್ಲೇ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಆಗಲಿದೆ. ಈ ಗ್ರಾಮ ಅಭಿವೃದ್ಧಿಯ ಕೀರ್ತಿ ಸಾಲಿಗ್ರಾಮ ವಾಲ್ಮೀಕಿ ನಾಯಕರ ಸಂಘಕ್ಕೆ ಸಿಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಮತ್ತು ವಿದ್ಯಾರ್ಥಿಗಳು ಆಗಮಿಸಿ ಅಗತ್ಯ ಮಾಹಿತಿ, ಸಲಹೆ ಪಡೆಯಬೇಕು ಎಂದು ತಿಳಿಸಿದರು.

ಹಿತರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ದೇವಪ್ಪನಾಯಕ ಮಾತನಾಡಿ, ರಾಜ್ಯದಲ್ಲಿ ನಾಯಕ ಸಮಾಜ ಸಂಘಟನೆಯಾಗಬೇಕು. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಲು ಯುವಕರು, ಸಮಾಜದ ಮುಖಂಡರು ಮುಂದಾಗಬೇಕು. ಆ ಮೂಲಕ ಸರ್ಕಾರದ ಸೌಲಭ್ಯ ಎಲ್ಲರಿಗೂ ತಲುಪಿಸುವ ಕೆಲಸವಾಗಬೇಕು ಎಂದರು.

ಸಾಲಿಗ್ರಾಮ ವಾಲ್ಮೀಕಿ ನಾಯಕರ ಸಂಘ ಹಲವು ವರ್ಷಗಳಿಂದ ಸಂಘಟನೆಯತ್ತ ಸಾಗಲು ಸಾಕಷ್ಟು ಪ್ರಯತ್ನಪಡುತ್ತಿದೆ. ಇತ್ತೀಚೆಗೆ ಬಂದ ಆಡಳಿತ ಮಂಡಳಿ ಸದಸ್ಯರು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರು ಹಾಗೂ ನಿವೃತ್ತ ನೌಕರನ್ನು ಅಭಿನಂದಿಸುವ ಜತೆಗೆ ಸಮುದಾಯ ಸಂಘಟನೆಯತ್ತಲೂ ಗಮನಹರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಯಕ ಯುವ ಸೇನೆ ರಾಜ್ಯ ಅಧ್ಯಕ್ಷ ದೇವರಾಜ ಕಾಟೂರ್ ಮಾತನಾಡಿ, ರಾಜ್ಯದಲ್ಲಿ ನಾಯಕ ಸಮಾಜದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸುವ ಮೂಲಕ ಆ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆ ಕೆಲಸ ಮಾಡಬೇಕು. ನಿಮ್ಮೊಂದಿಗೆ ರಾಜ್ಯ ಸಂಘಟನೆ ಬೆಂಬಲವಾಗಿರುತ್ತದೆ. ಪ್ರತಿ ಗ್ರಾಮಗಳಲ್ಲೂ ಸಂಘಟನೆಗಳು ಪ್ರಾರಂಭವಾಗಲಿ ಎಂದು ತಿಳಿಸಿದರು.

ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘ ಪ್ರಬಲವಾಗಿ ಸಂಘಟನೆ ಆಗುತ್ತಿದ್ದು, ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದು, ಅವರ ನೇತೃತ್ವದಲ್ಲಿ ಪ್ರತಿ ಗ್ರಾಮಗಳಲ್ಲೂ ಪ್ರತಿ ಹೋಬಳಿ ಮಟ್ಟದಲ್ಲೂ ವಾಲ್ಮೀಕಿ ಯುವ ಸಂಘಟನೆ ಮಾಡಿ ಗ್ರಾಮದ ಬಡವರನ್ನು ಗುರುತಿಸಿ ಸರ್ಕಾರದ ಸೌಲಭ್ಯ ಕೊಡಿಸಿ ಎಂದರು.

ಸಂಘದ ಅಧ್ಯಕ್ಷ ಸಿ.ಸಿ.ಮಹದೇವ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಲೀಲಾವತಿ, ದೇವಕಮ್ಮ, ತಾಲೂಕು ನೌಕರರ ಸಂಘದ ಅಧ್ಯಕ್ಷ ರೋಹಿತ್, ಉಪಾಧ್ಯಕ್ಷ ತಂದ್ರೆ ವೆಂಕಟೇಶನಾಯಕ, ಕಾರ್ಯದರ್ಶಿ ಕಿರಣ್, ಸುರೇಶ್, ಮಂಜುನಾಥ್, ಹುಣಸೂರು ಪ್ರಭಾಕರ್, ವಕೀಲ ಪ್ರವೀಣ್, ಪ್ರಭನಾಯಕ್, ಸಿದ್ದನಾಯಕ, ಕುಮಾರ್‌ನಾಯಕ, ನಿದೇಶಕರಾದ ಲೋಕೇಶ್, ಉದೇಶನಾಯಕ, ಗೊಬಿಶಂಕರ್, ಮಲ್ಲಿಕಾರ್ಜುನ್,ಲಕ್ಷ್ಮಣನಾಯಕ, ಸ್ವಾಮಿನಾಯಕ, ಭೈರೇಶ್, ಬೋರಪ್ಪನಾಯಕ, ಯುವ ವಾಲ್ಮೀಕಿ ಸಂಘದ ಅಧ್ಯಕ್ಷ ಪ್ರತಾಪ್, ಉಪಾಧ್ಯಕ್ಷ ನಾಗರಾಜ್, ಚೆಲುವನಾಯಕ, ನಾಗೇಶ್, ಕರ್ಪೂರವಳ್ಳಿ ರಮೇಶ್ ಇತರರು ಇದ್ದರು.