ಕೆ.ಆರ್.ನಗರದ ಶ್ರೀ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಎಂ.ಸಿ.ಚಂದ್ರಶೇಖರ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಸಾಕರಾಜು, ನಟರಾಜು, ಮುರಳೀಧರ್, ನೇತ್ರಾವತಿ, ದಶರಥ, ಶಿವಣ್ಣನಾಯಕ, ರಮೇಶ್, ಗೋವಿಂದರಾಜ್ ಇದ್ದರು. 
ಜಿಲ್ಲೆ

ಏಕಾಗ್ರತೆಯಿಂದ ವಿದ್ಯಾರ್ಥಿಗಳು ಸಾಧನೆ ಮಾಡುವಂತಾಗಲಿ

ಅಭಿನಯ್ ಎಚ್.ಎಂ

ಕೆ.ಆರ್.ನಗರ: ಪೆಟ್ಟು ತಿಂದು ಕಲ್ಲು ಶಿಲೆಯಾಗುವಂತೆ ನೀವೂ ಉತ್ತಮರಾಗಿ ಗುರಿ ತಲುಪಬೇಕಾದರೆ ಏಕಾಗ್ರತೆಯಿಂದ ಸಾಧನೆ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.

ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ಶಿಕ್ಷಣವೆಂಬುದು ಉತ್ತಮ ಭವಿಷ್ಯ ರೂಪಿಸುವ ಕಾಲಘಟ್ಟ. ಆದ್ದರಿಂದ ಪ್ರತಿ ವಿದ್ಯಾರ್ಥಿ ಅಚಲ ನಂಬಿಕೆ ಇಟ್ಟು ವಿಶ್ವಾಸದಿಂದ ಮುನ್ನಡೆಯಬೇಕು ಎಂದರು.

ಪಾಲಕರು, ಗುರು-ಹಿರಿಯರ ಮಾರ್ಗದರ್ಶನ ಪಡೆದು ಗುರಿಯತ್ತ ಮುನ್ನಗಬೇಕು. ಜತೆಗೆ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ದೇಶದ ಭವಿಷ್ಯದ ಉತ್ತಮ ಪ್ರಜೆಗಳಾಗಬೇಕು ಎಂದರು.

ದೇಶದ ಪ್ರಗತಿಗೆ ಆರೋಗ್ಯ ಮತ್ತು ಶಿಕ್ಷಣ ಬಹುಮುಖ್ಯವಾಗಿದ್ದು, ಆ ಕ್ಷೇತ್ರಗಳಿಗೆ ನಾನು ಮೊದಲ ಆದ್ಯತೆ ನೀಡಲಾಗುವುದು. ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ತರಲಾಗಿದ್ದು, ಕಾಲೇಜಿಗೆ ಹೊಸ ರೂಪಾ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾಲೇಜು ಪ್ರಾಂಶುಪಾಲ ಎಂ.ಸಿ.ಚಂದ್ರಶೇಖರ್, ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಾಕರಾಜು, ಸದಸ್ಯರಾದ ನಟರಾಜು, ಮುರಳೀಧರ್, ನೇತ್ರಾವತಿ, ದಶರಥ, ಶಿವಣ್ಣನಾಯಕ, ರಮೇಶ್, ಉಪ ಪ್ರಾಂಶುಪಾಲ ಕೆ.ವೈ.ನಾರಾಯಣಪ್ರಸಾದ್, ಕಾರ್ಮಿಕ ನಿರೀಕ್ಷಕ ಗೋವಿಂದರಾಜ್ ಇತರರು ಹಾಜರಿದ್ದರು.