ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜ್ಞಾನ ಸತ್ಯದ ಹಳದಿ ಮೇಲೆ ನಿಂತಿದೆ. ಸತ್ಯ ಒಂದೇ ಆಗಿದ್ದು ನಿರಂತರವಾಗಿದೆ. ಸೂರ್ಯೋದಯವಾಗುವುದು, ಗಾಳಿ ಬೀಸುವುದು ಪ್ರಾಕೃತಿಕ ಸತ್ಯ. ಈ ಸತ್ಯವನ್ನೇ ಜನರು ದೇವರು ಎಂದು ನಂಬಿದ್ದಾರೆ ಎಂದು ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಶರಣಪ್ಪ ತೋಟಪ್ಪ ನಂದಿಬೇವೂರ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಯುವ ವಿಜ್ಞಾನಿ ಪ್ರಶಸ್ತಿ-2024 ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿ ಶಕ್ತಿಯ ಪರಿವರ್ತನೆ ಆಗುತ್ತಿರುತ್ತದೆ. ಹೀಗಾಗಿ ಇಡೀ ಪ್ರಕೃತಿ ಚಟುವಟಿಕೆಯಿಂದ ಕೂಡಿರುವಂತೆ ಕಾಣುತ್ತದೆ. ಈ ಪ್ರಾಕೃತಿಕ ಶಕ್ತಿಗಳು ತೀವ್ರತರವಾದಾಗ ತಡೆಯುವುದು ಸಾಧ್ಯವಿಲ್ಲ. ಇಲ್ಲಿಯ ವಿಜ್ಞಾನದ ಶೋಧಗಳು ಮನುಕುಲದ ಒಳಿತಿಗೆ ಇರಬೇಕು ಎಂದರು.
ಕರ್ನಾಟಕ ವಿಶ್ವ ವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಜೆನ್ನಿರ್ ಪಿ. ಪಿಂಟೊ ಅವರಿಗೆ ಯುವ ವಿಜ್ಞಾನಿ ಪ್ರಶಸ್ತಿ-2024 ನೀಡಿ ಸತ್ಕರಿಸಲಾಯಿತು.
ಚಂದ್ರಕಾಂತ ಬೆಲ್ಲದ ಮಾತನಾಡಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಡಾ. ನಂದಿಬೇವೂರ ಅವರು ಪ್ರಪಂಚಕ್ಕೆ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ ಎಂದರು.
ಪ್ರೊ. ಎಸ್.ಟಿ. ನಂದಿಬೇವೂರ, ಶಿವಕುಮಾರ ಪಾಟೀಲ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ಶ್ರೀಶೈಲಪ್ಪ ಮಳಗಿ, ಅರ್ಚನಾ, ಶ್ರೀದೇವಿ, ಅಮರೇಶ ನಂದಿಬೇವೂರ, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾಥಿರ್ಗಳು, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಅರುಣಾ ನಂದಿಬೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.